ಜೂ. 5ರ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಘೋಷಣೆ

ಕನ್ನಡಪ್ರಭ ವಾರ್ತೆ ಭಟ್ಕಳ

ಮುರಿನಕಟ್ಟೆಯ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿದ ಕಟ್ಟೆಯನ್ನು ಧ್ವಂಸ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಭಟ್ಕಳ ಮತ್ತು ಸಾರದಹೊಳೆ ನಾಮಧಾರಿ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಜೂ. 5ರಂದು ಹಿಂದೂ ಸಂಘಟನೆಗಳ ಒಕ್ಕೂಟ ಮುರಿನಕಟ್ಟೆ ಧ್ವಂಸದ ಕುರಿತು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಈ ಕುರಿತು ಮಂಗಳವಾರ ಆಸರಕೇರಿಯ ನಿಚ್ಛಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ಥಾನದ ಸಭಾಗೃಹದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘ ಮತ್ತು ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಮುರಿನಕಟ್ಟೆಗೆ ತನ್ನದೇ ಆದ ಇತಿಹಾಸ ಇದೆ. ಇಲ್ಲಿ ಹಿಂದೂಗಳು ಮಾರಿಹೊರೆಯನ್ನು ಇಟ್ಟು ಪೂಜಿಸುವ ಸ್ಥಳವಾಗಿದೆ. ಹೆದ್ದಾರಿ ಅಗಲೀಕರಣದಿಂದಾಗಿ ನೂತನವಾಗಿ ನಿರ್ಮಿಸಲಾದ ಕಟ್ಟೆಯನ್ನು ಧ್ವಂಸ ಮಾಡಿರುವುದು ಖಂಡನೀಯ. ಕಟ್ಟೆ ಧ್ವಂಸ ಮಾಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಕೃತ್ಯ ಎಸಗದಂತೆ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.ಹಿಂದೂ ಸಂಘಟನೆಗಳ ಒಕ್ಕೂಟ 5ರಂದು ಮುರಿನಕಟ್ಟೆ ಧ್ವಂಸ ಖಂಡಿಸಿ ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಭಟ್ಕಳ ನಾಮಧಾರಿ ಒಕ್ಕೂಟ ಮತ್ತು ಸಾರದಹೊಳೆಯ ನಾಮಧಾರಿ ಒಕ್ಕೂಟದ ಸಂಪೂರ್ಣ ಬೆಂಬಲ ಇದೆ. ಮುರಿನಕಟ್ಟೆಯನ್ನು ಶೀಘ್ರವಾಗಿ ನಿರ್ಮಾಣ ಮಾಡಬೇಕು. ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಭಟ್ಕಳ ನಾಮಧಾರಿ ಒಕ್ಕೂಟದ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ, ಉಪಾಧ್ಯಕ್ಷ ಎಂ.ಕೆ. ನಾಯ್ಕ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಸಾರದಹೊಳೆ ನಾಮಧಾರಿ ಒಕ್ಕೂಟದ ಅಧ್ಯಕ್ಷ ನಾಗೇಂದ್ರ ನಾಯ್ಕ, ಉಪಾಧ್ಯಕ್ಷ ರಾಜು ನಾಯ್ಕ, ಕಾರ್ಯದರ್ಶಿ ರವೀಂದ್ರ ನಾಯ್ಕ, ಪ್ರಮುಖರಾದ ವಿಠಲ್ ನಾಯ್ಕ, ಮಹೇಶ ನಾಯ್ಕ, ಕೆ.ಆರ್. ನಾಯ್ಕ, ಮಹಾಬಲೇಶ್ವರ ನಾಯ್ಕ, ನಾಗೇಶ ನಾಯ್ಕ ಮುಂತಾದವರಿದ್ದರು.