ಸಾರಾಂಶ
ಸಾಕಷ್ಟು ಜನ ಪಕ್ಷದಿಂದ ದೂರ ಉಳಿದವರೆಲ್ಲರೂ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿರುವುದು ಹೆಚ್ಚಿನ ಶಕ್ತಿ ದೊರೆತಂತೆ ಆಗುತ್ತಿದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು. ತಾಪಂ ಮಾಜಿ ಉಪಾಧ್ಯಕ್ಷ ಮರಳಿ ಕಾಂಗ್ರೆಸ್ ಸೇರ್ಪಡೆಯಾದರು.
ಕನ್ನಡಪ್ರಭ ವಾರ್ತೆ ಚವಡಾಪುರ
ಭೀಮಾಶಂಕರ ಹೊನ್ನಕೇರಿ ಚತುರ ಸಂಘಟನಕಾರರಾಗಿದ್ದಾರೆ. ಅವರು ಕಾರಣಾಂತರಗಳಿಂದ ಪಕ್ಷದಿಂದ ದೂರ ಉಳಿದಿದ್ದರು. ಈಗ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಪುನಃ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಸಾಕಷ್ಟು ಜನ ಪಕ್ಷದಿಂದ ದೂರ ಉಳಿದವರೆಲ್ಲರೂ ಮರಳಿ ಪಕ್ಷಕ್ಕೆ ಬರುತ್ತಿರುವುದು ತಾಲೂಕಿನಲ್ಲಿ ಹೆಚ್ಚಿನ ಶಕ್ತಿ ದೊರೆತಂತೆ ಆಗುತ್ತಿದೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಅಫಜಲ್ಪುರ ತಾಲೂಕಿನ ಕರ್ಜಗಿ ಗ್ರಾಮದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೀಮಾಶಂಕರ ಹೊನ್ನಕೇರಿ ಮಾತನಾಡಿ, ನಾವು ಪಕ್ಷದಿಂದ ದೂರ ಉಳಿದರೂ ಕೂಡ ಮನಸ್ಸಿನಲ್ಲಿ ಸದಾ ಕಾಂಗ್ರೆಸ್ ಸಿದ್ಧಾಂತವೆ ತುಂಬಿದೆ. ಮನೆ ಇದ್ದ ಮೇಲೆ ಮುನಿಸು ಸಹಜ, ಹೀಗಾಗಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದೆ. ಆದರೆ ಈಗ ಲೋಕಸಭೆ ಚುನಾವಣೆ ಇರುವುದರಿಂದ ಜಿಲ್ಲೆಯಲ್ಲಿ ಪಕ್ಷದ ಪರವಾದ ಅಲೆ ಇದೆ. ರಾಧಾಕೃಷ್ಣ ದೊಡ್ಮನಿ ಗೆಲುವು ನಿಶ್ಚಿತವಾಗಿದ್ದು ಅವರ ಗೆಲುವಿನಲ್ಲಿ ನಮ್ಮ ಸೇವೆಯೂ ಇರಬೇಕು. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಪುನಃ ಪಕ್ಷ ಸೇರ್ಪಡೆಯಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಅಫಜಲ್ಪುರ ತಾಲೂಕಿನಿಂದ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ಬರುವಲ್ಲಿ ಶ್ರಮ ವಹಿಸುತ್ತೇವೆ ಎಂದರು.ಅಫಜಲ್ಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಾಶಂಕರ ಹೊನ್ನಕೇರಿ ತಮ್ಮ ಬೆಂಬಲಿಗರೊಂದಿಗೆ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಲೋಕಸಭೆ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ, ಮುಖಂಡರಾದ ರಾಜೇಂದ್ರಕುಮಾರ ಪಾಟೀಲ್ ರೇವೂರ, ರಮೇಶ ಪೂಜಾರಿ, ಜೆ.ಎಂ ಕೊರಬು, ಜ್ಞಾನೇಶ್ವರಿ ಪಾಟೀಲ, ಅನಸೂಯ ಸೂಲೇಕರ ಸೇರಿದಂತೆ ಅನೇಕರು ಇದ್ದರು.