ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಭೀಮಾತೀರ ಸಾಂಸ್ಕೃತಿಕ ಭಾಗವಾಗಿ ನಾಡಿಗೆ ಮಾದರಿಯಾಗಬೇಕು. ಭೀಮಾತೀರದ ಪರಂಪರೆಯನ್ನು ಯುವ ಸಮುದಾಯಕ್ಕೆ ತಲುಪಿಸಲು ಭೀಮಾಂತರಂಗ ಜಗುಲಿ ಕಟ್ಟಿಕೊಂಡು ಉತ್ತಮ ಕಾರ್ಯ ಮಾಡುತ್ತಿರುವ ಯುವ ಬರಹಗಾರರ ಕಾರ್ಯ ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಕರ್ನಾಟಕ ಟೀಚರ್ಸ್(ಬಿ.ಇಡಿ) ಕಾಲೇಜನಲ್ಲಿ ಭೀಮಾಂತರಂಗ ಆನ್ಲೈನ್ ಸಾಹಿತ್ಯಿಕ - ಸಾಂಸ್ಕೃತಿಕ ಜಗುಲಿ ಕೇಂದ್ರ ಹಮ್ಮಿಕೊಂಡಿದ್ದ ಭೀಮಾಂತರಂಗ ಉಪನ್ಯಾಸ ಮಾಲಿಕೆ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭೀಮೆಯ ಪರಂಪರೆ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಭೀಮೆಯ ಭಾಗ ಭವಿಷ್ಯದಲ್ಲಿ ಅಭಿಮಾನ, ಸಂಸ್ಕಾರ, ಸಂಸ್ಕೃತಿಯ ಭಾಗವಾಗಿ ಹೆಸರು ಪ್ರಚಾರವಾಗಬೇಕು. ಭೀಮೆಯ ದಡದಲ್ಲಿ ಶರಣರು, ಸಂತರು, ಸತ್ಪುರುಷರು ಜನಿಸಿ ಭೀಮಾತೀರವನ್ನು ಪಾವನ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಹೀಗಾಗಿ ಭೀಮಾನದಿ ಪುಣ್ಯಕ್ಷೇತ್ರಗಳ ತವರೂರು. ಭೀಮಾತೀರಕ್ಕೆ ಅಂಟಿದ ಕಳಂಕವನ್ನು ದೂರಮಾಡಿ, ಈ ಭಾಗದಲ್ಲಿ ಹೃದಯವಂತರಿದ್ದಾರೆ ಎಂಬುದನ್ನು ಪ್ರಚಾರಪಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಯುವ ಸಮುದಾಯದ ಬದುಕಿನಲ್ಲಿ ಭೀಮೆಯ ಅಂತರಂಗದಲ್ಲಿ ಅಡಗಿರುವ ಪುಣ್ಯಕ್ಷೇತ್ರ, ಸಾಹಿತಿಗಳು, ಶರಣರು, ಸಂತರು,ಸತ್ಪುರುಷರು ಆಗಿಹೋದ ಬಗ್ಗೆ ಸ್ಪೂರ್ತಿ ತುಂಬುವ ಕಾರ್ಯ ಮಾಡಬೇಕು. ಭೀಮೆಯ ನಾಡು ಸಾಂಸ್ಕೃತಿಕ ನಾಡಾಗಿ ಇತರೆ ಪ್ರದೇಶಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿ, ಭೀಮಾತೀರದಲ್ಲಿ ಸಾಂಸ್ಕೃತಿಕ ನಾಡು ಕಟ್ಟಿದವರ ಕನಸು ನನಸು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಭೀಮಾಂತರಂಗ ಕೃತಿ ಭೀಮಾತೀರದ ಸಂಸ್ಕೃತಿ ಅನಾವರಣ. ದತ್ತ ನಡೆದ ಪಾದುಕೆಯ ದಾರಿಯೇ ಭೀಮಾನದಿ, ಪುಣ್ಯಕ್ಷೇತ್ರ ಪವಿತ್ರ ನೆಲ ಎಂದು ಹೇಳಿದರು.
ಕೃಷ್ಣಾತೀರದಲ್ಲಿ ಹರಿದಷ್ಟು ಹೆಣಗಳು ಭೀಮೆಯಲ್ಲಿ ಹರಿದಿಲ್ಲ. ಆದರೂ ಭೀಮೆಗೆ ಭೀಮಾತೀರದ ಹಂತಕರು ಎಂಬ ಕಳಂಕ ಹಚ್ಚಿದ್ದು, ವಿಕಾರಕ್ಕೆ, ಭಾವನೆಗಳಿಗೆ ಧಕ್ಕೆ ತರುವ ಪದ ಪ್ರಯೋಗ ಮಾಡುವುದು ಸರಿಯಲ್ಲ ಎಂದು ಹೇಳಿದರು.ಭೀಮಾಂತರಂಗ ಕೃತಿ ಸಂಪಾದಕ ಸಿ.ಎಂ.ಬಂಡಗಾರ ಮಾತನಾಡಿ, ಗಂಗೆ, ತುಂಗೆ, ಕಾವೇರಿ ಆ ಭಾಗದ ಜನರಿಗೆ ಹೇಗೆ ಪ್ರವಿತ್ರವೋ ಹಾಗೆಯೇ ನಮಗೆ ಭೀಮೆಯು ಪವಿತ್ರ ಪುಣ್ಯನೆಲ. ಈ ನೆಲ, ಜಲ, ಸಂಸ್ಕೃತಿ ನಮಗೆ ಹೆಮ್ಮೆ. ಬಂಥನಾಳದ ಸಂಗನಬಸವ ಶ್ರೀ, ಮಿರಗಿಯ ಯಲ್ಲಾಲಿಂಗ, ದಕ್ಷಾಬ್ರಹ್ಮ ಯಜ್ಞ ಮಾಡಿದ ಭೀಮಾಶಂಕರ ಧೂಳಖೇಡ, ಪುಂಡಲಿಂಗ ಶ್ರೀ, ಸಿದ್ದಲಿಂಗ ಮಹಾರಾಜ, ಕಡಣಿಯ ಭೋಗಲಿಂಗೇಶ್ವರ ಹೀಗೆ ಶರಣ ಪರಂಪರೆಯೇ ಭೀಮಾನದಿ ದಂಡೆಯಲ್ಲಿದೆ. ಭೀಮೆಯು ಇಷ್ಟು ಪುಣ್ಯ, ಪವಿತ್ರ ಸ್ಥಳವಾದರೂ ಕಳಂಕ ತರುವ ಕಾರ್ಯ ನಡೆಯುತ್ತಿರವುದು ನೋವಿನ ಸಂಗತಿ ,ಇದನ್ನು ಹೋಗಲಾಡಿಸಲು ನಾವೆಲ್ಲ ಶ್ರಮಿಸೋಣ ಎಂದು ಹೇಳಿದರು.
ರಾಘವೇಂದ್ರ ಕುಲಕರ್ಣಿ ಕೃತಿ ಪರಿಚಯ ಮಾಡಿದರು. ಗೀತಯೋಗಿ ಭೀಮಾಂತರಂಗದ ಪಕ್ಷಿನೋಟ ಓದಿದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾಹುಕಾರ ಮಾತನಾಡಿದರು. ಸಂಶೋಧಕ ಡಿ.ಎನ್.ಅಕ್ಕಿ, ವೈ.ಜಿ.ಬಿರಾದಾರ, ಸಂತೋಷ ಬಂಡೆ, ಶ್ರೀಧರ ಹಿಪ್ಪರಗಿ, ವೀರಣ್ಣ ದಸ್ತರೆಡ್ಡಿ, ಬಸವರಾಜ ಕಿರಣಗಿ, ಪಿ.ಬಿ.ಕತ್ತಿ, ಸಂಗಣ್ಣ ಈರಾಬಟ್ಟಿ, ಬಿ.ಸಿ.ಭಗವಂತಗೌಡರ, ಸರೋಜನಿ ಮಾವಿನಮರದ, ಖಾಜು ಸಿಂಗೆಗೋಳ, ಉಮೇಶ ಕೋಳೆಕರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.