ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬುಧವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.ನಗರದ ಅಂಬೇಡ್ಕರ್ ಭವನದಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ನಿರ್ಮಿಸಿದ್ದ ಕೋರೆಗಾಂವ್ ವಿಜಯಸ್ತಂಭದ ಬಳಿ ತೆರಳಿ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿಯ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು.ದಸಂಸ ರಾಜ್ಯ ಸಂಚಾಲಕರಾದ ಸುಧಾ ವೆಂಕಟೇಶ್ ಮಾತನಾಡಿ, ಮಹರ್ ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜನವರಿ 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬಂದ ಬ್ರಿಟಿಷರು ಮಹರ್ ಯೋಧರ ನೆರವು ಕೋರಿದ್ದರು. ಆದರೆ, ಮಹರ್ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಆತನ ಬಳಿಗೆ ತನ್ನ ದಂಡನಾಯಕ ಸಿದ್ಧನಾಯಕನನ್ನು ಕಳುಹಿಸಿದರು ಎಂದು ಹೇಳಿದರು.
ಬಾಜಿರಾಯ ಬ್ರಾಹ್ಮಣ ಸಂಪ್ರದಾಯ ಪಾಲಿಸುವುದೇ ತನ್ನ ಧರ್ಮ ಎಂದು ಹೇಳಿ, ಅಸ್ಪೃಶ್ಯ ಯೋಧರ ಬೆಂಬಲ ತಿರಸ್ಕರಿಸಿ, ಸಿದ್ಧನಾಯಕನನ್ನು ಅಪಮಾನಿಸಿ ಕಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ಮಹರ್ ಯೋಧರು ಬಾಜಿರಾಯನ ಬೆನ್ನು ಮೂಳೆ ಮುರಿಯಲು ಬ್ರಿಟಿಷರ ಪರ ಯುದ್ಧ ಮಾಡಲು ಒಪ್ಪಿಕೊಳ್ಳುತ್ತಾರೆ ಎಂದು ತಿಳಿಸಿದರು.1818ರ ಜನವರಿ 1ರಂದು ಈಗಿನ ಪುಣೆ ಹತ್ತಿರದ ಭೀಮಾ ನದಿ ದಂಡೆ ಮೇಲಿನ ಕೋರೆಗಾಂವ್ ಬಳಿ 30 ಸಾವಿರ ಸೈನಿಕರಿದ್ದ ಪೇಶ್ವೆ ಹಾಗೂ 500 ಮಹರ್ ಸೈನಿಕರ ಮಧ್ಯೆ ಯುದ್ಧ ನಡೆದು ಬ್ರಿಟಿಷರ ಕೊರಳಿಗೆ ವಿಜಯ ಮಾಲೆ ಬಿದ್ದಿತು. ಬಾಜಿರಾಯ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ. ಭೀಮಾ ಕೋರೆಗಾಂವ್‌ನಲ್ಲಿ ಮಹರ್ ವೀರಯೋಧರು ಶೋಷಿತರ ವಿಮೋಚನೆಗಾಗಿ ಪ್ರಾಣತ್ಯಾಗ ಮಾಡಿ ಅಸ್ಪೃಶ್ಯ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಟ್ಟ ಚಾರಿತ್ರಿಕ ದಿನ. ಆದ್ದರಿಂದ ಈ ಮಹಾನ್ ವೀರ ಯೋಧರ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಹುತಾತ್ಮರ ಸ್ಮರಣಾರ್ಥ ಬ್ರಿಟಿಷ್ ಸರ್ಕಾರ ನಿರ್ಮಿಸಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಿದ್ದರು. ಅಂಬೇಡ್ಕರ್ ರ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು. ಅವರ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.ನಿವೃತ್ತ ಶಿಕ್ಷಕ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಸಾವಿರಾರು ವರ್ಷಗಳಿಂದ ಅವಕಾಶ ವಂಚಿತರಾಗಿದ್ದ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಅವಕಾಶಗಳ ಬಾಗಿಲುಗಳನ್ನು ತೆರೆದರು. ಅವರ ತತ್ವ, ಚಿಂತನೆಗಳ ಹಾದಿಯಲ್ಲಿ ಜನರು ನಡೆದು ದೇಶದ ಹಲವು ಸಮಸ್ಯೆಗಳಿಗೆ ಸಂವಿಧಾನದ ಚೌಕಟ್ಟಿನಲ್ಲೇ ಪರಿಹಾರ ಕಂಡು ಹಿಡಿಯಬೇಕು. ಅಂಬೇಡ್ಕರ್ ಅವರು ಹಾಕಿಕೊಟ್ಟ ಕಾನೂನಿನ ಚೌಕಟ್ಟಿನಲ್ಲೇ ನಡೆಯುವ ಜೊತೆಗೆ ಸಂವಿಧಾನ, ಕಾನೂನಿಗೆ ಆದ್ಯತೆ ನೀಡಿ ಗೌರವಿಸಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಆಶಯಗಳು ಇಂದಿಗೂ ಈಡೇರಿಲ್ಲಜಾನಪದ ಅಕಾಡೆಮಿ ಸದಸ್ಯ ಗ.ನ. ಅಶ್ವತ್ಥ್ ಮಾತನಾಡಿ, ಮಹರ್ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಅವರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಆಶಯಗಳು ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ ಈಡೇರಲು ಸಾಧ್ಯವಾಗದಿರುವುದು ದುರಂತವೇ ಸರಿ. ಇಂದು ಅಂಬೇಡ್ಕರ್ ಅವರು ಭಾವನಾತ್ಮಕವಾಗಿ ಮಾತ್ರ ಸೀಮಿತವಾಗದೇ ಅರಿವಿನ ಅಂಬೇಡ್ಕರ್ ಆದಾಗ ಮಾತ್ರ ಸಾಮಾಜಿಕ ಬದಲಾವಣೆ ಮತ್ತು ಅಭಿವೃದ್ಧಿ ಸಾಧ್ಯ. ಬಾಲ್ಯದಿಂದಲೂ ಜಾತೀಯತೆಯ ಅಪಮಾನ, ನೋವು ಸಂಕಟಗಳಿಗೆ ಗುರಿಯಾಗಿದ್ದ ಅಂಬೇಡ್ಕರ್ ರಿಗೆ ಆ ಅನುಭವಗಳೇ ಉನ್ನತ ಸಾಧನೆ ಮಾಡಲು ಪ್ರೇರಣೆಯಾದವು. ಪ್ರಾಣಿಗಳಿಗಿಂತಲೂ ಕಡೆಯಾಗಿ ಮನುಷ್ಯರನ್ನು ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ದುಡಿಯುವ ವರ್ಗವಾಗಿದ್ದ ಶೋಷಿತ ಸಮುದಾಯಗಳನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಲು ಅಹರ್ನಿಶಿ ಶ್ರಮಿಸಿದರು ಎಂದು ತಿಳಿಸಿದರು. ಸಂವಿಧಾನಬದ್ಧ ಹಕ್ಕುಗಳ ಮುಖಾಂತರ ಶೋಷಣೆಯಿಂದ ಕೂಡಿದ್ದ ಸಮಾಜಕ್ಕೆ ನ್ಯಾಯ, ಅವಕಾಶಗಳನ್ನು ಕಲ್ಪಿಸಿದರು. ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಈ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂಬೇಡ್ಕರ್ ಎಂದರೆ ಈ ದೇಶದ ಬಹದೊಡ್ಡ ಶಕ್ತಿ ಮತ್ತು ಪ್ರೇರಣೆಯಾಗಿದೆ. ನಮ್ಮ ಸಂವಿಧಾನವನ್ನು ಸಂರಕ್ಷಿಸಿ ಅಂಬೇಡ್ಕರ್ ಸಿದ್ಧಾಂತವನ್ನು ಒಪ್ಪುವ ಮನಸ್ಥಿತಿಯುಳ್ಳ ಸರ್ಕಾರಗಳು ಬರಬೇಕಿದೆ ಎಂದರು.ದಸಂಸ ಮುಖಂಡರಾದ ಶ್ರೀನಿವಾಸಯ್ಯ, ಸುಲಿಕುಂಟೆ ವೆಂಕಟೇಶ್, ವೆಂಕಟರಾಮ್, ನಾಗರಾಜ್. ಎನ್.ಶ್ರೀನಿವಾಸ್, ಮುನಿರಾಜ್, ಅಂಜಿ, ವೆಂಕಟ್, ಚಿಕ್ಕಪ್ಪಯ್ಯ, ನಂದೀಶ್, ಕೃಷ್ಣಯ್ಯ, ಚಂದ್ರಮೋಹನ್, ವೆಂಕಟೇಶ್, ಶಂಕರ್, ಆನಂದ್, ಡೇವಿಡ್. ಮತ್ತಿತರರು ಇದ್ದರು.