ಭೀಮಾ ನೀರು: ಕಾನೂನು ಹೋರಾಟಕ್ಕೆ ಪಂಚ ಸೂತ್ರ

| Published : Mar 28 2024, 12:47 AM IST

ಸಾರಾಂಶ

ರಾಜ್ಯ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಮಹಾರಾಷ್ಟ್ರದ ಉಜನಿ ಜಲಾಶಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತುಕೊಳ್ಳುವ ಕೆಲಸ ಮಾಡಬೇಕು

ಕನ್ನಡಪ್ರಭ ವಾರ್ತೆ ಚವಡಾಪುರ

ಭೀಮಾ ನದಿ ನೀರು ಹಂಚಿಕೆ ಕುರಿತು ಬಚಾವತ್ ತೀರ್ಪು ಬಂದಿದ್ದು ನಮಗೆ ತೀರ್ಪಿನಿಂದ ವರದಾನವಾಗಿದ್ದರೂ ಕೂಡ ಭೀಮೆಗೆ ನೀರು ಹರಿಸಿಕೊಳ್ಳುವಲ್ಲಿ ನಾವು ಎಡವಿದ್ದೇವೆ. ಇಂದು ಶಿವಕುಮಾರ ನಾಟೀಕಾರ ಮಾಡಿದ ಹೋರಾಟ ಭೀಮೆಯ ದಂಡೆಯವರೆಲ್ಲ ಕೂಡಿಕೊಂಡು 30 ವರ್ಷಗಳ ಹಿಂದೆ ಮಾಡಬೇಕಾಗಿತ್ತು ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ನಡೆದ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನಾಟೀಕಾರ ಅವರಿಗೆ ಎಳನೀರು ಕುಡಿಸಿ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲು ಮನವಿ ಮಾಡಿ ಮಾತನಾಡಿದರು.

ಕಳೆದ 12 ದಿನಗಳಿಂದ ಪಕ್ಷಭೇದ ಮರೆತು ಭೀಮೆಯ ನೀರಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದರ ಫಲವಾಗಿ ಇಂದು ಭೀಮಾ ನದಿಗೆ 1 ಟಿಎಂಸಿ ನೀರು ಹರಿದು ಬರತ್ತಿದೆ. ನದಿಗೆ ನೀರು ಹರಿಯುತ್ತಿರುವುದರ ಶ್ರೇಯ ನಾಟೀಕಾರಗೆ ಸಲ್ಲಿದರೂ ಕೂಡ ಒಕ್ಕೋರಲ ಬೆಂಬಲ ವ್ಯಕ್ತ ಪಡಿಸಿದ ತಾಲೂಕಿನ ಹಾಗೂ ಸುತ್ತಮುತ್ತಲಿನ ತಾಲೂಕಿನ ಜನರಿಗೂ ಶ್ರೇಯ ಸಲ್ಲಬೇಕು. ಇದೇ ರೀತಿಯ ಸಹಕಾರ, ಒಗ್ಗಟ್ಟನ್ನು ಮುಂದಿನ ದಿನಗಳಲ್ಲೂ ವ್ಯಕ್ತ ಪಡಿಸಿದರೆ ನಮ್ಮ ಪಾಲಿನ ನೀರು ಪಡೆಯುವುದಕ್ಕೆ ಅನುಕೂಲವಾಗಲಿದೆ ಎಂದರು.

ಶಿವಕುಮಾರ ನಾಟೀಕಾರ ಮಾತನಾಡಿ, ಪಟ್ಟಣದ ವ್ಯಾಪಾರಿಗಳು, ವರ್ತಕರು, ವಿವಿಧ ಮಠಾಧೀಶರು, ಸಂಘ ಸಂಸ್ಥೆಗಳ ಸಹಕಾರದಿಂದ 12 ದಿನಗಳ ಕಾಲ ನಡೆದ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ಸಿಕ್ಕಿದ್ದರಿಂದ ಇಂದು ತಾತ್ಕಲಿಕವಾಗಿ ಭೀಮಾ ನದಿಗೆ ನೀರು ಹರಿದು ಬರುತ್ತಿದೆ. ಇಷ್ಟಕ್ಕೆ ನಾವು ಖುಷಿಯಾಗುವುದು ಬೇಡ. ನಮ್ಮ ಪಾಲಿನ ನೀರು ಪಡೆಯಲು ನಾವು ಕಾನೂನು ಸಮರ ಮಾಡಬೇಕಾಗಿದೆ. ಸತ್ಯಾಗ್ರಹಕ್ಕೆ ನೀಡಿದ ಬೆಂಬಲ ಕಾನೂನು ಹೋರಾಟಕ್ಕೂ ಕೊಟ್ಟರೆ ನಮ್ಮ ಪಾಲಿನ ನೀರು ನಾವು ಪಡೆಯಲು ಅನುಕೂಲವಾಗಲಿದೆ ಎಂದ ಅವರು 12 ದಿನಗಳ ಕಾಲ ನನ್ನೊಂದಿಗೆ ಸಹಕಾರ ನೀಡಿ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಋಣಿಯಾಗಿದ್ದೇನೆ ಎಂದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಶಾಂತಭೀಷ್ಮ ಚೌಡಯ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಈ ವೇಳೆ ಐದು ತಿರ್ಮಾನಗಳನ್ನು ಶಾಸಕ ಎಂ.ವೈ ಪಾಟೀಲ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಹಾಗೂ ನೆರೆದಿದ್ದ ನೂರಾರು ಪ್ರಮುಖರ ಸಮ್ಮುಖದಲ್ಲಿ ನಿರ್ಣಯಿಸಲಾಯಿತು. ನಾಟೀಕಾರ ಅವರು ಉಪಾಸ ಸತ್ಯಾಗ್ರಹ ಅಂತ್ಯಗೊಳಿಸುವುದಾಗಿ ತಿಳಿಸಿದರು. ಹೀಗಾಗಿ ಸಭೆಯ ಬಳಿಕ ಎಲ್ಲರೂ ಕೂಡಿಕೊಂಡು ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಮಣೂರ ಗ್ರಾಮದತ್ತ ತೆರಳಿದರು.

ಸಭೆಯಲ್ಲಿ ಕೈಗೊಂಡ ಐದು ನಿರ್ಣಯ

1) ರಾಜ್ಯ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚಿಸಿ ಮಹಾರಾಷ್ಟ್ರದ ಉಜನಿ ಜಲಾಶಯಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅರಿತುಕೊಳ್ಳುವ ಕೆಲಸ ಮಾಡಬೇಕು.

2) ಬಚಾವತ್ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಹರಿಸುವಂತೆ ಮಹಾರಾಷ್ಟ್ರ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವರಿಕೆ ಮಾಡಿಸಬೇಕು.

3) ಭೀಮಾ ನದಿಯ ನೈಸರ್ಗಿಕ ಹರಿವು ಉಳಿಸುವ ಕೆಲಸಕ್ಕೆ ಸಂಬಂಧ ಪಟ್ಟವರು ಕ್ರಮಕ್ಕೆ ಮುಂದಾಗಬೇಕು.

4) ಅಫಜಲ್ಪುರ ತಾಲೂಕಿನ ಭೋರಿ ಹಾಗೂ ಅಮರ್ಜಾ ನದಿಗಳ ವ್ಯಾಪ್ತಿಯಲ್ಲಿ ಕೆರೆ-ಕುಂಟೆಗಳ ರಕ್ಷಣೆ ಮತ್ತು ನೀರು ತುಂಬಿಸುವ ಕೆಲಸ ಆಗಬೇಕು.

5) ಬಚಾವತ್ ಜಲತೀರ್ಪಿನ ಪ್ರಕಾರ ನಮ್ಮ ಹಕ್ಕಿನ ನೀರು ಪಡೆಯಲು ಕಾನೂನಾತ್ಮಕ ದಾವೆ ಹೂಡಬೇಕು.