ಡಿ.5 ರಂದು ಮರಾಠಾಧೀಶರ ನೇತೃತ್ವದಲ್ಲಿ ಹೋರಾಟ

| Published : Dec 02 2023, 12:45 AM IST

ಸಾರಾಂಶ

ಉ.ಕ. ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಧರಣಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಿತ್ತೂರು ಕರ್ನಾಟಕ ಪ್ರಾಧಿಕಾರ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.5 ರಂದು ಉತ್ತರ ಕರ್ನಾಟಕದ ಮಠಾಧೀಶರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರಾಧಿಕಾರ ರಚನೆ ಮಾಡಿದ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಪ್ರಾಧಿಕಾರ ರಚನೆ ಮಾಡಬೇಕು. ಈವರೆಗೆ ಬಂದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಲೇ ಬಂದಿವೆ ದೂರಿದರು.

ಈ ಹೋರಾಟದ ಬಗ್ಗೆ ಈಗಾಗಲೇ ಮಠಾಧೀಶರಿಗೆ ಆಮಂತ್ರಣ ನೀಡಲಾಗಿದೆ. ಸುವರ್ಣ ವಿಧಾನಸೌಧಕ್ಕೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ರಾಜ್ಯ ಮಟ್ಟದ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಬೇಕು. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸುವರ್ಣ ವಿಧಾನಸೌಧಕ್ಕೆರಾಜ್ಯ ಮಟ್ಟದ ಪ್ರಮುಖ ಕಚೇರಿ ಸ್ಥಳಾಂತರ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಿ ಬೆಳಗಾವಿ ಜನರಿಗೆ ತೊಂದರೆಗೆ ಸಿಲುಕುವಂತೆ ಮಾಡಿದೆ. ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಬೋಳಶೆಟ್ಟಿ, ಮಾಣಿಕ್ಯ ಚಲ್ಲೂರ, ಪ್ರಕಾಶ ದೇಸಾಯಿ, ಶ್ರೀನಿವಾಸ್ ಗೌಡ ಪಾಟೀಲ, ವಿಲೀನಕುಮಾರ ತಾರಿಹಾಳ ಇದ್ದರು.