ಪೌರಕಾರ್ಮಿಕರಿಗೆ ಸಿಗದ ಭೀಮಾಶ್ರಯ!

| Published : Nov 23 2024, 12:35 AM IST

ಸಾರಾಂಶ

ಬೆಳಗ್ಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಉಪಾಹಾರ ಸೇವಿಸಲು, ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳಲು, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದಲೇ ಪ್ರತ್ಯೇಕ ತಂಗುದಾಣ ಮಾಡಲಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪೌರಕಾರ್ಮಿಕರ ವಿಶ್ರಾಂತಿಗಾಗಿ ನಿರ್ಮಿಸಿರುವ ಭೀಮಾಶ್ರಯ ತಂಗುದಾಣಗಳು ಇದ್ದೂ ಇಲ್ಲದಂತಾಗಿವೆ. ಉದ್ಘಾಟನೆಯಾಗಿ ವರ್ಷ ಕಳೆದರೂ ಪೌರಕಾರ್ಮಿಕರಿಗೆ ಕೊಡುತ್ತಿಲ್ಲ. ಆದರೆ, ಭೀಮಾಶ್ರಯ ತಂಗುದಾಣಗಳು ಸದುಪಯೋಗವಾಗುತ್ತಿವೆ ಎಂದು ಮಹಾನಗರ ಪಾಲಿಕೆ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಿದೆ.

ಬೆಳಂಬೆಳಗ್ಗೆ ಕೆಲಸಕ್ಕೆ ಹಾಜರಾಗುವ ಕಾಯಕಯೋಗಿಗಳೆಂದರೆ ಅದು ಪೌರಕಾರ್ಮಿಕರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2100ಕ್ಕೂ ಅಧಿಕ ಪೌರಕಾರ್ಮಿಕರಿದ್ದು ಇದರಲ್ಲಿ ಮಹಿಳೆಯರೇ ಹೆಚ್ಚು. ಬೆಳಗ್ಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಉಪಾಹಾರ ಸೇವಿಸಲು, ನೈಸರ್ಗಿಕ ಕ್ರಿಯೆ ಮುಗಿಸಿಕೊಳ್ಳಲು, ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದಲೇ ಪ್ರತ್ಯೇಕ ತಂಗುದಾಣ ಮಾಡಬೇಕೆಂದು ಪಾಲಿಕೆ ಯೋಚಿಸಿತ್ತು. ಸರ್ಕಾರ ಕೂಡ ವಿಶ್ರಾಂತಿ ತಂಗುದಾಣಗಳನ್ನಾಗಿ ಮಾಡಿಕೊಡಿ ಎಂದು ಆದೇಶಿಸಿತ್ತು. ಅದರಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತಿವಲಯಕ್ಕೆ ಎರಡರಂತೆ ಪಾಲಿಕೆ ವ್ಯಾಪ್ತಿಯಲ್ಲಿ 25 ವಿಶ್ರಾಂತಿ ತಂಗುದಾಣಗಳನ್ನು ಪೌರಕಾರ್ಮಿಕರಿಗಾಗಿ ನಿರ್ಮಿಸಿತ್ತು. ಈ ಪೈಕಿ ಹುಬ್ಬಳ್ಳಿಯಲ್ಲಿ 17, ಧಾರವಾಡದಲ್ಲಿ 8 ತಂಗುದಾಣಗಳನ್ನಾಗಿ ಮಾಡಲಾಗಿದೆ. ಇವುಗಳಿಗೆ ಭೀಮಾಶ್ರಯ ಎಂದು ಹೆಸರಿಸಲಾಗಿದೆ.

ಇಲ್ಲಿ ಶೌಚಾಲಯ, ಬಾತ್‌ ರೂಮ್‌, ಕನ್ನಡಿಯೊಂದಿಗೆ ಬಟ್ಟೆ ಬದಲಿಸಿಕೊಳ್ಳಲು ಪ್ರತ್ಯೇಕ ಕೊಠಡಿ, ಉಪಾಹಾರ ಸೇವಿಸಲು ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಸಕಲ ಸೌಕರ್ಯಗಳು ಈ ಕಂಟೇನರ್‌ಗಳಲ್ಲಿ ಇದೆ. ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಮಳೆ-ಗಾಳಿ ಬಂದರೂ ಇಲ್ಲಿ ಆಶ್ರಯ ಪಡೆಯಬಹುದು. ಜತೆಗೆ ಯಾರಾದರೂ ಪೌರಕಾರ್ಮಿಕರಿಗೆ ಹುಷಾರಿರಲಿಲ್ಲ ಎಂದರೆ ಇಲ್ಲಿ ವಿಶ್ರಾಂತಿ ಪಡೆಯಲು ಅನುಕೂಲಕರವಾಗಿದೆ.

ಉದ್ಘಾಟನೆಯಾಗಿ ವರ್ಷ:

ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ 25 ಭೀಮಾಶ್ರಯ ತಂಗುದಾಣಗಳನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲೇ ಪಾಲಿಕೆ ಉದ್ಘಾಟಿಸಿತ್ತು. ಆದರೆ, ಈ ವರೆಗೂ ಪೌರಕಾರ್ಮಿಕರ ಕೈಗೆ ಮಾತ್ರ ಇವುಗಳ ಚಾವಿ ಸಿಕ್ಕಿಲ್ಲ. ಹೀಗಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇವು ಉಪಯೋಗಕ್ಕೆ ಬಾರದ ಕಾರಣ ಕೆಲ ಭೀಮಾಶ್ರಯ ತಂಗುದಾಣಗಳ ಬಲ್ಬ್‌ ಕಳ್ಳರ ಪಾಲಾಗಿದ್ದರೆ, ಕೆಲವು ತಂಗುದಾಣಗಳ ಮೇಲೆ ಗಿಡಗಂಟಿ ಬೆಳೆದಿವೆ. ಕೆಲವು ತಂಗುದಾಣಗಳ ಎದುರಿಗೆ ಗೂಡಂಗಡಿ ಮಾಲೀಕರು ತಮ್ಮ ಅಂಗಡಿ ಇಟ್ಟುಕೊಂಡು ವ್ಯಾಪಾರ ಕೂಡ ನಡೆಸುತ್ತಿದ್ದಾರೆ. ಆದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಇದ್ದಾರೆ.

ನೈಸರ್ಗಿಕ ಕರೆಗೆ ಭೀಮಾಶ್ರಯದ ಪಕ್ಕದ ಜಾಗವನ್ನು ಪುರುಷ ಪೌರಕಾರ್ಮಿಕರ ಬಳಸುವಂತಾಗಿದೆ. ಮಹಿಳಾ ಪೌರಕಾರ್ಮಿಕರ ಗೋಳಂತೂ ಹೇಳುವಂತೆಯೇ ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಹೇಳುವುದು ಬೇರೆ:

ಬಹುತೇಕ ಭೀಮಾಶ್ರಯ ತಂಗುದಾಣ ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗಿದೆ. ಕೆಲವೇ ಕೆಲವು ತಂಗುದಾಣಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಆಗಿಲ್ಲ. ಹೀಗಾಗಿ ಅವುಗಳನ್ನಷ್ಟೇ ಬಳಸಲಾಗುತ್ತಿಲ್ಲ. ಆದರೆ ಬಹುತೇಕ ಎಲ್ಲವೂ ಸದುಪಯೋಗವಾಗುತ್ತಿದೆ ಎಂದು ಪಾಲಿಕೆ ಅಧಿಕಾರಿ ವರ್ಗ ಹೇಳುತ್ತದೆ. ಪೌರಕಾರ್ಮಿಕರು ಮಾತ್ರ ಇಲ್ಲ, ಭೀಮಾಶ್ರಯ ಉದ್ಘಾಟನೆಯಾಗಿದೆಯಷ್ಟೇ, ಆದರೆ ಈ ವರೆಗೂ ಉಪಯೋಗವಾಗುತ್ತಿಲ್ಲ ಎಂದು ದೂರುತ್ತಾರೆ.

ಏನೇ ಆಗಲಿ, ಇನ್ಮೇಲಾದರೂ ಎಲ್ಲ ಭೀಮಾಶ್ರಯಗಳಿಗೆ ನೀರಿನ ಸಂಪರ್ಕ ಕೊಡಿಸಿ, ನಿರ್ವಹಣೆ ಕೊರತೆಯಿಂದ ಹಾಳಾಗಿರುವ ತಂಗುದಾಣಗಳ ದುರಸ್ತಿ ಮಾಡಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಬೇಕು. ಅಂದರೆ ಪೌರಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂಬುದು ಪೌರಕಾರ್ಮಿಕರು ಹಾಗೂ ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ಪೌರಕಾರ್ಮಿಕರ ವಿಶ್ರಾಂತಿಗಾಗಿ 25 ಭೀಮಾಶ್ರಯ ತಂಗುದಾಣಗಳನ್ನು ನಿರ್ಮಿಸಲಾಗಿದೆ. 5-6 ಬಿಟ್ಟು ಉಳಿದ ಎಲ್ಲ ತಂಗುದಾಣಗಳನ್ನು ಉಪಯೋಗವಾಗುತ್ತಿವೆ. 5-6 ತಂಗುದಾಣಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಸಾಧ್ಯವಾಗಿಲ್ಲ. ಶೀಘ್ರದಲ್ಲೇ ನೀರಿನ ಸಂಪರ್ಕ ಕಲ್ಪಿಸಿ ಅವುಗಳನ್ನು ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಹೇಳಿದ್ದಾರೆ.

ಉದ್ಘಾಟನೆ ಮಾಡಿದ್ದು ಬಿಟ್ಟರೆ ಈ ವರೆಗೂ ನಮಗೆ ಬಳಸಲು ಭೀಮಾಶ್ರಯ ತಂಗುದಾಣಗಳನ್ನು ನೀಡಿಯೇ ಇಲ್ಲ. ಹೀಗಾಗಿ ಈಗಲೂ ಬೀದಿಯಲ್ಲೇ ಕುಳಿತು ಟೀಫಿನ್‌ ಮಾಡುತ್ತೇವೆ. ವಿಶ್ರಾಂತಿ ಪಡೆಯಬೇಕೆಂದರೆ ಸಾಧ್ಯವಾಗುತ್ತಿಲ್ಲ. ಇನ್ನಾದರೂ ಅಧಿಕಾರಿ ವರ್ಗ ಭೀಮಾಶ್ರಯ ತಂಗುದಾಣ ದುರಸ್ತಿ ಮಾಡಿಸಿ ನಮಗೆ ಕೊಡಬೇಕು ಎಂದು ಪೌರಕಾರ್ಮಿಕರಾದ ಲಕ್ಷ್ಮಿ ಬಳ್ಳಾರಿ ಆಗ್ರಹಿಸಿದ್ದಾರೆ.