ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಬಳಘಟ್ಟ ಗ್ರಾಪಂ ಪಂಚಾಯ್ತಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ಅಂದಾಜು 6.50 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಭೂಮಿ ಪೂಜೆ ನೆರವೇರಿಸಿದರು.ಬಳಘಟ್ಟ ಗ್ರಾಪಂ ವ್ಯಾಪ್ತಿಯ ಪಗಡೆಕಲ್ಲಹಳ್ಳಿ 65 ಲಕ್ಷ ರು., ರಾಂಪುರ 50 ಲಕ್ಷ, ಸಿಂಗಾಪುರ 35 ಲಕ್ಷ, ಗುಜುಗೋನಹಳ್ಳಿ 50 ಲಕ್ಷ, ತಾಳೆಕೆರೆ 40 ಲಕ್ಷ, ಚಲ್ಲರಹಳ್ಳಿಕೊಪ್ಪಲು 35 ಲಕ್ಷ, ಅಂದಾನಿಗೌಡಕೊಪ್ಪಲು 40 ಲಕ್ಷ, ಕನಗೋನಹಳ್ಳಿ 10 ಲಕ್ಷ, ಮದೇನಹಳ್ಳಿ 80 ಲಕ್ಷ, ನಾರಾಯಣಾಪುರ 35 ಲಕ್ಷ, ಬಿ.ಕೊಡಹಳ್ಳಿ 80, ಬಿ.ಆರ್.ಕೊಪ್ಪಲು 50 ಲಕ್ಷ ಹಾಗೂ ಬಳಘಟ್ಟ ಗ್ರಾಮದಲ್ಲಿ 60 ಲಕ್ಷ ರು. ವೆಚ್ಚದಲ್ಲಿ ಗ್ರಾಮ ಪರಿಮಿತಿಯ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಿದರು.
ಬಳಿಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಾಲೂಕಿನ ಬಳಘಟ್ಟ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸಾಕಷ್ಟು ಹಿಂದುಳಿದ ಗ್ರಾಮಗಳಾಗಿದ್ದು, ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಅಧ್ವಾನಗೊಂಡಿದ್ದವು. ಆ ಹಿನ್ನೆಲೆಯಲ್ಲಿ ವೈರಮುಡಿ ಉತ್ಸವಕ್ಕೆ ಬಿಡಿಗಡೆಯಾಗಿ ಉಳಿದ ಅನುದಾನದ 6.50 ಕೋಟಿ ರು. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು ಎಂದರು.ತಾಲೂಕಿನ ಹಲವಾರು ಮುಖ್ಯ ರಸ್ತೆಗಳೇ ಗುಂಡಿಬಿದ್ದಿವೆ. ಅವುಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ, ಪ್ರಮುಖವಾಗಿ ಪಾಂಡವಪುರ- ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಕಷ್ಟು ಗುಂಡಿಬಿದ್ದು, ವಾಹನ ಸಂಚಾರಕ್ಕೆ ಅನಾನೂಕೂಲವಾಗಿದ್ದ ಹಿನ್ನೆಲೆಯಲ್ಲಿ ಮೊದಲು ಆ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.
ಪಾಂಡವಪುರ-ಮಂಡ್ಯ ರಸ್ತೆಯೂ ಸಹ ಗುಂಡಿಬಿದ್ದಿದೆ. ಆ ರಸ್ತೆಯಲ್ಲಿ ಎಲ್ ಆಂಡ್ ಟಿ ಕಂಪನಿಯವರು ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಅದು ಮುಗಿದ ಬಳಿಕ ರಸ್ತೆಗೆ ಡಾಂಬರೀಕರಣ ನಡೆಯಲಿದೆ. ಅಲ್ಲದೇ, ತಾಲೂಕಿನ ಹಲವು ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಬಳಘಟ್ಟ ಏತನೀರಾವರಿ ಯೋಜನೆಯಲ್ಲಿ ಬಳಘಟ್ಟ ವ್ಯಾಪ್ತಿಯ ಕೆರೆಗಳ ತುಂಬಿಸಲು ಸಣ್ಣ ಪೈಪ್ ಅಳವಡಿಕೆ ಮಾಡಿದ್ದು ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನುವ ದೂರುಗಳು ಜನರಿಂದ ಕೇಳಿಬರುತ್ತಿವೆ. ಆ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಮುಖಂಡರಾದ ಕನಗೋನಹಳ್ಳಿನ ಪರಮೇಶ್, ಜಕ್ಕನಹಳ್ಳಿ ಚಂದ್ರಶೇಖರ್, ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೋಕಿಲ ಜ್ಞಾನೇಶ್, ಸೇರಿದಂತೆ ಬಳಘಟ್ಟ ಗ್ರಾಪಂ ವ್ಯಾಪ್ತಿಯ ಹಳ್ಳಿ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.