ಪಾಂಡವಪುರ ತಾಲೂಕಿನ ಬಳಿಘಟ್ಟ ಏತ ನೀರಾವರಿ ಯೋಜನೆಯಲ್ಲಿ ಕೈ ಬಿಟ್ಟಿರುವ ಕೆರೆ-ಕಟ್ಟೆಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುದಾನದಡಿ 29ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಮೇಲುಕೋಟೆ ಹೋಬಳಿ ವ್ಯಾಪ್ತಿಯಲ್ಲಿ 3 ಗ್ರಾಮ ಪಂಚಾಯ್ತಿ ವ್ಯಾಪ್ತಿಗಳ ಸುಮಾರು 30 ರಿಂದ 35 ಗ್ರಾಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 44 ಕೆರೆಗಳಿಗೆ ನೀರು ತುಂಬಿಸುವ ಬಳಿಘಟ್ಟ ಏತ ನೀರಾವರಿ ಯೋಜನೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು.ತಾಲೂಕಿನ ಬಳಿಘಟ್ಟ ಏತ ನೀರಾವರಿ ಯೋಜನೆಯಲ್ಲಿ ಕೈ ಬಿಟ್ಟಿರುವ ಕೆರೆ-ಕಟ್ಟೆಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುದಾನದಡಿ 29ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಯೋಜನೆ ಜಾರಿಯಿಂದ ಈ ಭಾಗದ ಸುಮಾರು 7000 ಎಕರೆ ಜಮೀನುಗಳಿಗೆ ನೀರುಣಿಸುವ ಜತೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.
ಇದಕ್ಕೂ ಮೊದಲು ಶಾಸಕರು ತಾಲೂಕಿನ ಕುರಹಳ್ಳಿ ಲೋಕಪಾವನಿ ಬಳಿ ಬೇಬಿ ಕೆರೆ ಮುಂಭಾಗದಲ್ಲಿ ಬೇಬಿ ಬೆಟ್ಟದ ಎರಡು ಕೆರೆಗಳಿಗೆ ಹಾಗೂ ಲೋಕಪಾವನಿ ನದಿಯಿಂದ ಸುಂಕಾತೊಣ್ಣೂರು ಕೆರೆ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಲೋಕಾರ್ಪಣೆಗೊಳಿಸಿದರು.30ಕೋಟಿ ರು .ವೆಚ್ಚದಲ್ಲಿ ಒಟ್ಟು 17ಕೆರೆಗಳಿಗೆ ಈ ಯೋಜನೆಯಡಿ 121ದಿನಗಳವರೆಗೆ ನೀರು ತುಂಬಿಸಲಾಗುತ್ತದೆ. ಇನ್ನೂ ಕೈಬಿಟ್ಟಿರುವ 11 ಕೆರೆಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸಲು ಹೆಚ್ಚುವರಿಯಾಗಿ 5 ಕೋಟಿ ರು. ಮಂಜುರಾಗಿದೆ. ಡಿಪಿಆರ್ ಕೂಡ ಸಿದ್ದಗೊಳಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಚಾಲನೆಗೊಳ್ಳಲಿದೆ ಎಂದರು.
ಮೇಲುಕೋಟೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್ ಗೌಡ, ಉದ್ಯಮಿ ಜಕ್ಕನಹಳ್ಳಿ ಚಂದ್ರು, ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎನ್.ವಿಜಯಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ದೊಡ್ಡಿಘಟ್ಟ ಸುರೇಶ್, ಅತಿಗಾನಹಳ್ಳಿ ನಾಗರಾಜು, ಜಗದೀಶ್, ಸಿದ್ದೇಗೌಡ, ಕಾಳೇನಹಳ್ಳಿ ಪುಟ್ಟಸ್ವಾಮಿಗೌಡ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜನಿಯರ್ ಇ.ಮ್ರಾನ್ ಖಾನ್, ಸಹಾಯಕ ಇಂಜನಿಯರ್ ಮನುಕುಮಾರ್, ಗುತ್ತಿಗೆದಾರರಾದ ಬಾಪೂಜಿ ಕನ್ ಸ್ಟ್ರಕ್ಷನ್ ಪ್ರೈ.ಲಿಮಿಟೆಡ್ ನ ಚೇತನ್ ಹಾಗೂ ಭೀಮನಗೌಡ ಪಾಟೀಲ್, ರೈತಸಂಘದ ಮುಖಂಡರು, ಯಜಮಾನರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.ಮಳೆ ಆಶ್ರಿತ ಗ್ರಾಮಗಳಿಗೆ ಕಾವೇರಿ ಮತೆಯ ಆಶೀರ್ವಾದಕನ್ನಡಪ್ರಭ ವಾರ್ತೆ ಪಾಂಡವಪುರದಶಕಗಳಿಂದಲೂ ಕೇವಲ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಜಕ್ಕನಹಳ್ಳಿ ಮತ್ತು ಮಾಣಿಕ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಈಗ ಈ ಯೋಜನೆಯಿಂದ ಕಾವೇರಿ ಮಾತೆಯ ಆಶೀರ್ವಾದ ದೊರೆಯಲಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ದಶಕದ ಕನಸು ಹಾಗೂ ಈ ಭಾಗದ ರೈತರ ಭಗೀರಥ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಶ್ರೀಕ್ಷೇತ್ರ ಮೇಲುಕೋಟೆ ಬೆಟ್ಟದ ತಪ್ಪಲಿನ ಗ್ರಾಮಗಳಾದ ಜಕ್ಕನಹಳ್ಳಿ ಮತ್ತು ಮಾಣಿಕ್ಯನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಒಣಭೂಮಿಗೆ ಕಾವೇರಿ ಮಾತೆ ಸಂಜೀವಿನಿಯಾಗಿ ಹರಿಯಲಿದ್ದಾಳೆ.ಇಂದು ಕೇವಲ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಈ ಭಾಗದ 44ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ. ಸುಮಾರು 7,000 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರಕಲಿದೆ. ಕದಲಗೆರೆ, ಕಾಡೇನಹಳ್ಳಿ, ಜಕ್ಕನಹಳ್ಳಿ, ದೊಡ್ಡಿಘಟ್ಟ, ಗರುಡಾಪುರ, ಲಕ್ಷ್ಮಿಪುರ, ಚಿಟ್ಟನಹಳ್ಳಿ, ಮೇಲುಕೋಟೆ, ಗೌಡಗೆರೆ, ಬೆಳ್ಳಾಳೆ, ಮಾಣಿಕ್ಯನಹಳ್ಳಿ, ಸಿಂಗ್ರಿಗೌಡನಕೊಪ್ಪಲು ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೇರ ಲಾಭವಾಗಲಿದೆ.ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ರೈತಸಂಘದ ಕಾರ್ಯಕರ್ತರು ತಾಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಅಭಿನಂದಿಸಿದರು. ನಂತರ ಬೈಕ್ ರ್‍ಯಾಲಿ ಮೂಲಕ ಶಾಸಕರನ್ನು ಹೊಸಕೆರೆ ಬಳಿ ಏತ ನೀರಾವರಿ ಯೋಜನೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಕರೆ ತಂದರು.