ಕರ್ನಾಟಕದ ಅಧಿದೇವತೆ ಭುವನೇಶ್ವರಿ ಕನ್ನಡಿಗನ ಸ್ವಾಭಿಮಾನದ ಪ್ರತೀಕ

| Published : Feb 23 2025, 12:35 AM IST

ಸಾರಾಂಶ

ಚಿಕ್ಕಮಗಳೂರುಕರ್ನಾಟಕದ ಅದಿದೇವತೆ ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಪ್ರತಿಪಾದಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿ ಡಾ.ಮಹೇಶ್ ಜೋಶಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ನಾಟಕದ ಅದಿದೇವತೆ ತಾಯಿ ಭುವನೇಶ್ವರಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಪ್ರತಿಪಾದಿಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು ಭಾರತೀಯರಿಗೆ ಮೂರ್ತಿ ಪ್ರತಿಷ್ಟಾಪನೆ, ಆರಾಧನೆ ಎಂಬುದಕ್ಕೆ ಭಾವನಾತ್ಮಕ ಸಂಬಂಧವಿದೆ. ಆ ಹಿನ್ನೆಲೆಯಲ್ಲಿ ನಗರದ ಕನ್ನಡ ಭವನದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಅನಾವರಣ ಮಾಡಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು. ಕನ್ನಡದ ಮೊದಲ ಕದಂಬ ದೊರೆ ಮಯೂರ ವರ್ಮನ ಕಾಲದಿಂದಲೂ ತಾಯಿ ಭುವನೇಶ್ವರಿ ಆರಾಧನೆ ಮಾಡಲಾಗುತ್ತಿದೆ. ಅದರೊಂದಿಗೆ ವಿಜಯನಗರ ಸ್ಥಾಪನೆ ಮಾಡಲು ಸಂಕಲ್ಪಿಸಿದ ವಿದ್ಯಾರಣ್ಯರು ತಾಯಿ ಭುವನೇಶ್ವರಿ ಪೂಜೆಯೊಂದಿಗೆ ತಮ್ಮ ಕಾರ್ಯವನ್ನು ಆರಂಭಿಸಿದ್ದರು ಎಂದು ನೆನಪಿಸಿದರು.ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೇಲುಕೋಟೆಯಲ್ಲಿ ಭುವನೇಶ್ವರಿ ಮಂಟಪ ನಿರ್ಮಿಸಿದರೇ ಕೊನೆ ದೊರೆ ಜಯ ಚಾಮರಾಜೇಂದ್ರ ಒಡೆಯರ್ ತಮ್ಮ ಅರಮನೆಯಲ್ಲಿ ತಾಯಿ ಭುವನೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ತಮ್ಮ ಜೀವನ ಪರ್ಯಂತ ಆರಾಧಿಸಿದ್ದರು ಎಂದು ಹೇಳಿದರು.ಪೂಜಾರಿ ಮಧ್ಯಸ್ಥಿಕೆ ಇಲ್ಲದೆ ಆರಾಧಿಸಬಹುದಾದ ಏಕೈಕ ದೈವ ತಾಯಿ ಭುವನೇಶ್ವರಿ ಎಂದು ಹೇಳಿದ ಅವರು ಕರ್ನಾಟಕ ಏಕೀಕರಣ ಹೋರಾಟಕ್ಕೆ ನಾಡದೇವತೆ ಭುವನೇಶ್ವರಿಯೇ ಸ್ಪೂರ್ತಿ ಎಂದು ತಿಳಿಸಿದರು.೮೯ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಲು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಕೋರಿರುವುದು ನ್ಯಾಯ ಸಮ್ಮತ ವಾಗಿದೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಯೊಬ್ಬರು ಕನ್ನಡಿಗರೇ ಆಗಿದ್ದಾರೆ. ಅದರೊಂದಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಲು ಅಗತ್ಯವಿರುವ ಕನ್ನಡದ ಕಟ್ಟಾಳುಗಳು, ಸೌಲಭ್ಯಗಳು ಸಮರ್ಪಕವಾಗಿರುವುದರಿಂದ ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಇಲ್ಲಿಯೇ ಸಮ್ಮೇಳನ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಚೆನ್ನಬಸಪ್ಪ ಮಾತನಾಡಿ ಕರ್ನಾಟಕ ಏಕೀಕರಣಕ್ಕಾಗಿ ಜನ ಜಾಗೃತಿ ಮೂಡಿಸಿ ಹಗಲಿರುಳು ಶ್ರಮಿಸಿದರು ಹೋರಾಟಕ್ಕೆ ದೊರೆಯದಿದ್ದ ದಿನಗಳಲ್ಲಿ ಹೋರಾಟಕ್ಕೆ ಆಧ್ಯಾತ್ಮಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಕನ್ನಡದ ಕಟ್ಟಾಳು ಶಾಸಕರು ಆಗಿದ್ದ ಅಂದಾನಪ್ಪ ದೊಡ್ಡಮೇಟಿಯವರು ೧೯೫೩ರಲ್ಲಿ ಕಲಾವಿದರಿಂದ ಆಳೆತ್ತರದ ತಾಯಿ ಭುವನೇಶ್ವರಿ ಚಿತ್ರಪಟವನ್ನು ಚಿತ್ರಿಸಿ ಆ ಚಿತ್ರಣದ ಮೂಲಕ ಸ್ಪೂರ್ತಿಪಡೆದು ಹೋರಾಟವನ್ನು ಮುನ್ನಡೆಸಿದ್ದರು ಎಂದು ಸ್ಮರಿಸಿದರು. ತಾಯಿ ಭುವನೇಶ್ವರಿ ಎಂಬ ದೇವತೆ ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಶಕ್ತಿಯ ಪ್ರತೀಕ. ಯಾರನ್ನು, ಯಾವುದನ್ನು ಕಣ್ಣಾರೆ ಕಾಣಲು ಆರಾಧಿಸಲು ಸಾಧ್ಯವಿಲ್ಲವೋ ಅವರನ್ನು ಪ್ರತಿಷ್ಠಾಪಿಸಿ ನಮಿಸುವುದು ಈ ದೇಶದ ಸಂಸ್ಕೃತಿ. ಅದರಂತೆ ತಾಯಿ ಭುವನೇಶ್ವರಿಯನ್ನು ಪುತ್ಥಳಿ ರೂಪದಲ್ಲಿ ಪ್ರತಿಷ್ಟಾಪಿಸಲಾಗಿದೆ ಎಂದರು. ಸರಸ್ವತಿ ವಿದ್ಯೆಗೆ ಅಧಿಪತಿಯಾದರೆ ತಾಯಿ ಭುವನೇಶ್ವರಿ ಶಕ್ತಿ ಸ್ವರೂಪಿಣಿ ಎಂದರು.ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ನಗರದ ಖ್ಯಾತ ವೈದ್ಯ ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕನ್ನಡ ಸೇವೆ ಅತ್ಯುನ್ನತವಾದದ್ದು ಅಂತಹ ಮಹಾನ್ ಸೇವೆ ಮಾಡುತ್ತಿರುವ ನಾವು ನೀವೆಲ್ಲರೂ ಪುಣ್ಯವಂತರು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷಸೂರಿ ಶ್ರೀನಿವಾಸ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಕಚೇರಿಯಲ್ಲಿ ಹೊರತುಪಡಿಸಿದರೆ ತಾಯಿ ಭುವನೇಶ್ವರಿ ಪುತ್ಥಳಿಯನ್ನು ಚಿಕ್ಕಮಗಳೂರು ಸಾಹಿತ್ಯ ಭವನದಲ್ಲಿ ಮಾತ್ರ ಪ್ರತಿಷ್ಠಾಪಿಸಿರುವುದು ಹೆಮ್ಮೆ ತಂದಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಭುವನೇಶ್ವರಿ ಮೂರ್ತಿಯ ದಾನಿಗಳಾದ ಡಾ. ಜೆ.ಪಿ. ಕೃಷ್ಣೇಗೌಡ, ಪ್ರಭುಸೂರಿ, ಶ್ರೀವತ್ಸರವರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅದೇ ವೇದಿಕೆಯಲ್ಲಿ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಸಹಕಾರ ನೀಡಿದ ನಗರದ ಛಾಯಾ ಗ್ರಹಕ ಎ.ಎನ್ ಮೂರ್ತಿ ಹಾಗೂ ಕಸಾಪ ನಗರ ಅಧ್ಯಕ್ಷ ಸಚಿನ್ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾವಿದ್ಯಾಲಯದ ಉಪಕುಲಪತಿ, ಸಿ.ಕೆ ಸುಬ್ಬರಾಯ, ವಕೀಲ ವೆಂಕಟೇಶ್ , ಮಹಾಲಕ್ಷ್ಮಿನಾಗರಾಜ್, ಸುನೀತಕಿರಣ್, ರೂಪ ನಾಯಕ್ ಉಪಸ್ಥಿತರಿದ್ದರು.

--ಬಾಕ್ಸ್--

ಏಕೀಕರಣ ಹೋರಾಟಕ್ಕೆ ನಾಡದೇವತೆಯೇ ಸ್ಫೂರ್ತಿ

ಪೂಜಾರಿ ಮಧ್ಯಸ್ಥಿಕೆ ಇಲ್ಲದೆ ಆರಾಧಿಸಬಹುದಾದ ಏಕೈಕ ದೈವ ತಾಯಿ ಭುವನೇಶ್ವರಿ ಎಂದು ಹೇಳಿದ ಅವರು ಕರ್ನಾಟಕ ಏಕೀಕರಣ ಹೋರಾಟಕ್ಕೆ ನಾಡದೇವತೆ ಭುವನೇಶ್ವರಿಯೇ ಸ್ಪೂರ್ತಿ ಎಂದು ನಾಡೋಜ ಡಾ.ಮಹೇಶ್ ಜೋಶಿ ತಿಳಿಸಿದರು.

ಕನ್ನಡದ ಮೊದಲ ಕದಂಬ ದೊರೆ ಮಯೂರ ವರ್ಮನ ಕಾಲದಿಂದಲೂ ತಾಯಿ ಭುವನೇಶ್ವರಿ ಆರಾಧನೆ ಮಾಡಲಾಗುತ್ತಿದೆ. ಅದರೊಂದಿಗೆ ವಿಜಯನಗರ ಸ್ಥಾಪನೆ ಮಾಡಲು ಸಂಕಲ್ಪಿಸಿದ ವಿದ್ಯಾರಣ್ಯರು ತಾಯಿ ಭುವನೇಶ್ವರಿ ಪೂಜೆಯೊಂದಿಗೆ ತಮ್ಮ ಕಾರ್ಯವನ್ನು ಆರಂಭಿಸಿದ್ದರು ಎಂದು ನೆನಪಿಸಿದರು.

--

ಕ್ಯಾಪ್ಷನ್‌:

ಚಿಕ್ಕಮಗಳೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ತಾಯಿ ಭುವನೇಶ್ವರಿಯ ಪುತ್ತಳಿಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾಕ್ಟರ್ ಮಹೇಶ್ ಜೋಶಿ ಅನಾವರಣಗೊಳಿಸಿದರು