ಜಿಲ್ಲಾ ಪೊಲೀಸ್‌ ಅಧೀಕ್ಷಕ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಜ. 2023ರಿಂದ 27 ಜುಲೈ 2026ರ ವರೆಗೆ ನಡೆಸಲಾದ ನಿರಂತರ ದಾಳಿ ಹಾಗೂ ತನಿಖೆಗಳ ಫಲವಾಗಿ ಮಾದಕದ್ರವ್ಯ ಜಾಲಕ್ಕೆ ದೊಡ್ಡ ಮಟ್ಟದ ತಡೆ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯನ್ನು ಸಂಪೂರ್ಣ ನಶೆಯುಕ್ತ ಹಾಗೂ ಮಾದಕ ದ್ರವ್ಯ ಮುಕ್ತವಾಗಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ವತಿಯಿಂದ ಭಾರಿ ಕಾರ್ಯಾಚರಣೆ ನಡೆಸಲಾಗಿದೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಪ್ರದೀಪ ಗುಂಟಿ ಅವರ ಮಾರ್ಗದರ್ಶನದಲ್ಲಿ ಜ. 2023ರಿಂದ 27 ಜುಲೈ 2026ರ ವರೆಗೆ ನಡೆಸಲಾದ ನಿರಂತರ ದಾಳಿ ಹಾಗೂ ತನಿಖೆಗಳ ಫಲವಾಗಿ ಮಾದಕದ್ರವ್ಯ ಜಾಲಕ್ಕೆ ದೊಡ್ಡ ಮಟ್ಟದ ತಡೆ ಬಿದ್ದಿದೆ.

ಈ ಮೂರು ಮುಕ್ಕಾಲು ವರ್ಷಗಳ ಅವಧಿಯಲ್ಲಿ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 145 ಅಕ್ರಮ ಮಾದಕದ್ರವ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳ ಲಾಗಿದ್ದು, ಜಾಲದಲ್ಲಿ ಭಾಗಿಯಾಗಿದ್ದ 202 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಕೋಟಿ ಮೌಲ್ಯದ ಮಾದಕ ವಸ್ತು ವಶ: ಕಾರ್ಯಾಚರಣೆಯ ವೇಳೆ ಪೊಲೀಸರು ಒಟ್ಟು 28,92,45,989 (ಸುಮಾರು ₹28.92 ಕೋಟಿ ರುಪಾಯಿ) ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮುದ್ದೆಮಾಲಿನಲ್ಲಿ 3,524.647 ಕೆಜಿ ಗಾಂಜಾ, 66,955 ನಿಷೇಧಿತ ಗುಳಿಗೆಗಳು, 1,991 ಕೆಮ್ಮಿನ ಸಿರಪ್‌ ಬಾಟಲಿಗಳು, 366 ಗ್ರಾಂ ಕೊಕೇನ್‌, 499 ಗ್ರಾಂ ಎಂಡಿ ಮೆಥಾಂ ಫಿಟಮೈನ್‌, 6.75 ಗ್ರಾಂ ಎಂಡಿಎಂಎ ಹಾಗೂ 5 ಎಂಡಿಎಂಎ ಮಾತ್ರೆಗಳು ಸೇರಿವೆ.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು:

ಕೇವಲ ಅಪರಾಧಗಳ ತಡೆಗಟ್ಟುವಿಕೆ ಮಾತ್ರವಲ್ಲದೆ, ಯುವಜನತೆ ಮತ್ತು ಸಾರ್ವಜನಿಕರನ್ನು ಮಾದಕ ವ್ಯಸನದಿಂದ ದೂರವಿಡಲು ಜಾಗೃತಿ ಕಾರ್ಯಕ್ರಮ ಗಳಿಗೂ ಒತ್ತು ನೀಡಲಾಗಿದೆ. 2024ರಿಂದ 2026ರ ಅವಧಿಯಲ್ಲಿ ಸಾವಿರಾರು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದ್ದು, ಎನ್‌ಸಿಸಿಒಆರ್‌ಡಿ (NCORD) ಸಭೆಗಳ ಮೂಲಕ ಪೊಲೀಸ್‌ ಇಲಾಖೆಯು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಜಿಲ್ಲೆಯಲ್ಲಿ ಮಾದಕದ್ರವ್ಯದ ಅಕ್ರಮ ಸಾಗಾಟ ಮತ್ತು ಮಾರಾಟ ಸಂಪೂರ್ಣ ನಿಲ್ಲುವವರೆಗೂ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.

ವರ್ಷವಾರಿ ಪ್ರಕರಣಗಳ ಸಾರಾಂಶ:

2023ರಲ್ಲಿ 32 ಪ್ರಕರಣಗಳನ್ನು ದಾಖಲಿಸಿ, ₹11.21 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. 2024ರಲ್ಲಿ 24 ಪ್ರಕರಣಗಳಡಿ ₹5.33 ಕೋಟಿ ಹಾಗೂ 2025ರಲ್ಲಿ 34 ಪ್ರಕರಣಗಳಡಿ ₹11.16 ಕೋಟಿ ಮೌಲ್ಯದ ಮಾದಕದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಸಕ್ತ ಸಾಲಿನಲ್ಲಿ (27 ಜುಲೈ 2026ರವರೆಗೆ) 55 ಪ್ರಕರಣಗಳು ದಾಖಲಾಗಿದ್ದು, 37 ಆರೋಪಿಗಳನ್ನು ಬಂಧಿಸಿ ₹1.20 ಕೋಟಿಗೂ ಅಧಿಕ ಮೌಲ್ಯದ ಮುದ್ದೇಮಾಲನ್ನು ಜಪ್ತಿ ಮಾಡಲಾಗಿದೆ. ಇನ್ನು ಮಾದಕದ್ರವ್ಯ ಸೇವನೆಗೆ ಸಂಬಂಧಿಸಿದಂತೆ 2024ರಲ್ಲಿ 5, 2025ರಲ್ಲಿ 2 ಹಾಗೂ 2026ರಲ್ಲಿ 35 ಪ್ರಕರಣಗಳನ್ನು ದಾಖಲಿಸಲಾಗಿದೆ.