8ರಂದು ಬೃಹತ್ ಉದ್ಯೋಗ ಮೇಳ: ಜಿಲ್ಲಾಧಿಕಾರಿ

| Published : Oct 28 2023, 01:16 AM IST

ಸಾರಾಂಶ

ಸ್ವಯಂ ಉದ್ಯೋಗ ಆರಂಭಿಸಲಿಚ್ಛಿಸುವವರಿಗೆ ಸೂಕ್ತ ಮಾರ್ಗದರ್ಶನ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ನವೆಂಬರ್ 8ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ರಾಜ್ಯದ 50ಕ್ಕೂ ಹೆಚ್ಚಿನ ಬೃಹತ್ ಕಂಪನಿಗಳು ಭಾಗವಹಿಸುತ್ತಿವೆ. 5000ಕ್ಕೂ ಹೆಚ್ಚಿನ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು, ಐಟಿಐ, ಡಿಪ್ಲೋಮಾ ಸೇರಿದಂತೆ ಎಲ್ಲ ರೀತಿಯ ಉನ್ನತ ಶಿಕ್ಷಣ, ತರಬೇತಿ ಪಡೆದ ಯುವಕರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಬಹುದು. ಅಲ್ಲದೇ ಮೇಳ ನಡೆಯುವ ದಿನದಂದು ಆಕಾಂಕ್ಷಿಗಳು ಸ್ಥಳದಲ್ಲಿಯೇ ಹೆಸರು ನೋಂದಾಯಿಸಿಕೊಂಡು ಭಾಗವಹಿಸಲು ಸಹ ಅವಕಾಶ ಕಲ್ಪಿಸಲಾಗಿದೆ ಎಂದರು. ಈ ಮೇಳದಿಂದಾಗಿ ಭವಿಷ್ಯದ ದಿನಗಳಲ್ಲಿ ಪ್ರತಿಭಾವಂತ ಪದವೀಧರ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಅದರ ಪ್ರಾಥಮಿಕ ಪರಿಚಯವಾಗಲಿದೆ. ಅನೇಕ ವಿಷಯಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿಗಳ ಮಾಹಿತಿಗಳು ದೊರೆಯಲಿವೆ. ಸ್ವಯಂ ಉದ್ಯೋಗ ಆರಂಭಿಸಲಿಚ್ಛಿಸುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ಹೇಳಿದರು. ಸಾಫ್ಟ್‌ವೇರ್, ಆಟೋಮೊಬೈಲ್, ಫೌಂಡ್ರಿ, ರಿಟೇಲ್ ಫಾರ್ಮಸಿ, ಹಣಕಾಸು ವಿಮೆ, ಗಾರ್ಮೆಂಟ್ಸ್ ಸೇರಿದಂತೆ 50ಕ್ಕೂ ಹೆಚ್ಚಿನ ಸ್ಥಳೀಯ ಮತ್ತು ರಾಜ್ಯಮಟ್ಟದ ಬೃಹತ್ ಕಂಪನಿಗಳು ಭಾಗವಹಿಸಲಿವೆ. ಈ ಮೇಳದಲ್ಲಿ ಅಪ್ರೆಂಟಿಸ್‍ಶಿಪ್‌ ತರಬೇತಿ ಪಡೆಯಲಿಚ್ಚಿಸುವವರು, ಕೌಶಲ್ಯ ತರಬೇತಿ ಪಡೆಯುವವರು, ಆಯ್ಕೆಗೊಂಡ ನಂತರ ನಿಗದಿಪಡಿಸಿದ ವಿಷಯದಲ್ಲಿ ತರಬೇತಿ ಪಡೆಯಲಿಚ್ಚಿಸುವವರು, ಸ್ವಉದ್ಯೋಗ ಆರಂಭಿಸುವವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಆಸಕ್ತರಿಗೆ ಬ್ಯಾಂಕುಗಳ ಸಾಲಸೌಲಭ್ಯ ಮುಂತಾದ ಮಾಹಿತಿಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ. ಭಾಗವಹಿಸುವ ಉದ್ಯೋಗಾಕಾಂಕ್ಷಿಗಳು, ಕೈಗಾರಿಕೋದ್ಯಮಿಗಳು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಸುಜಾತಾ, ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಸ್. ಸುರೇಶ್, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್‌ ಖಾನ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗಣೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. - - - ಕೋಟ್‌ ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯಾಧುನಿಕ ರೀತಿಯ ಎಲೆಕ್ಟ್ರಿಕ್ ವೆಹಿಕಲ್ ಮತ್ತು ರೋಬೋಟಿಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 70,000 ಮಕ್ಕಳು ಐಟಿಐ ಮತ್ತು ಡಿಪ್ಲೋಮಾ ತರಬೇತಿಗೆ ದಾಖಲಾಗಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಪ್ರಮಾಣ ಪತ್ರಕ್ಕೆ ದೇಶ-ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ - ಡಾ.ನಾಗೇಂದ್ರ ಎಫ್. ಹೊನ್ನಳ್ಳಿ, ನಿರ್ದೇಶಕ, ಕೌಶಲ್ಯಾಭಿವೃದ್ಧಿ ಇಲಾಖೆ, ಬೆಂಗಳೂರು. - - -