ಸಾರಾಂಶ
ಹಾವೇರಿ: ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಪರಮೇಶ ಶಂಕ್ರಪ್ಪ ಬಂಡಿ ಅವರು ಸೂಕ್ಷ್ಮ ಕಲೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ರಾಣಿಬೆನ್ನೂರಿನ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ಈ ಕುರಿತು ದಾಖಲೆ ಪ್ರದರ್ಶಿಸಿದರು.ಪಿಯುಸಿ ಅಧ್ಯಯನ ಮಾಡಿರುವ ಪರಮೇಶ ಅವರು ಜೀವನೋಪಾಯಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಸಣ್ಣ ಅಂಗಡಿ ಹಾಕಿಕೊಂಡು ಜೀವನ ನಡೆಸುತ್ತಿದ್ದು, ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡು ೮೦ ನಿಮಿಷದಲ್ಲಿ ೧೪೪ ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ದಾಖಲೆ ನಿರ್ಮಿಸಿದ್ದಾರೆ ಎಂದರು.
ಜಿಲ್ಲೆಯ ಯುವ ಪ್ರತಿಭೆ ಪರಮೇಶ ಅವರ ವಿಶಿಷ್ಟ ಕಲೆ ಗಿನ್ನಿಸ್ ದಾಖಲೆಯಲ್ಲಿ ಮೂಡಬೇಕು ಎಂದು ಅವರು ಹಾರೈಸಿದರು.ಕಲಾವಿದ ಪರಮೇಶ ಬಂಡಿ ಮಾತನಾಡಿ, ಹತ್ತು ವರ್ಷಗಳಿಂದ ಸೂಕ್ಷ್ಮ ಕಲೆ ಮಾಡುತ್ತಿದ್ದೇನೆ. ೯೨ ಅಕ್ಕಿ ಕಾಳು ಬಳಸಿ ವಂದೇ ಮಾತರಂ ಗೀತೆ ರಚಿಸಿದ್ದು, ಅದನ್ನು ವಿಧಾನಸೌಧದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಕೊಠಡಿಯಲ್ಲಿ ಇರಿಸಲಾಗಿದೆ. ೧೧೧ ಅಕ್ಕಿಕಾಳಿನಲ್ಲಿ ಸುಬ್ರಹ್ಮಣ್ಯ ಶ್ಲೋಕ ಬರೆಯಲಾಗಿದ್ದು, ಅದನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇರಿಸಿದ್ದಾರೆ. ೩೦ ಅಕ್ಕಿಕಾಳಿನಲ್ಲಿ ಕಾಂತಾರ ಸಿನಿಮಾ ಗೀತೆ ರಚಿಸಿದ್ದೇನೆ. ಇತ್ತೀಚೆಗೆ ೧೪೪ ಅಕ್ಕಿ ಕಾಳು ಬಳಸಿ ೮೦ ನಿಮಿಷದಲ್ಲಿ ನಾಡಗೀತೆ ರಚಿಸಿದ್ದೇನೆ. ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಚಿತ್ರೀಕರಿಸಿಕೊಂಡು ಬಳಿಕ ಅವಾರ್ಡ್ ಕೊಟ್ಟಿದ್ದಾರೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆಯನ್ನು ೩ ಭಾಷೆಯಲ್ಲಿ ಬರೆದಿದ್ದು, ಅದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಉಡುಗೊರೆ ನೀಡುವ ತಯಾರಿ ನಡೆದಿದೆ. ಅಲ್ಲದೇ ೧೦-೨೦ ಸಾವಿರ ಅಕ್ಕಿಕಾಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಬರೆಯುವ ಸಂಕಲ್ಪ ಮಾಡಿದ್ದೇನೆ. ಜತೆಗೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆಗೆ ೧೦-೨೦ ಸಾವಿರ ಅಕ್ಕಿಕಾಳಿನಲ್ಲಿ ಜೈ ಶ್ರೀರಾಮ್ ಎಂದು ಬರೆದು ದಾಖಲೆ ನಿರ್ಮಿಸುವ ಉದ್ದೇಶ ಹೊಂದಿದ್ದೇನೆ. ಈ ಸೂಕ್ಷ್ಮ ಕಲೆಯಲ್ಲಿ ಇನ್ನಷ್ಟು ಸಾಧನೆಗೈದು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದರು. ಕಲಾವಿದರಾದ ಗಣೇಶ ರಾಯ್ಕರ್, ಅಜಯ್ ಮಠದ, ಕರಿಯಪ್ಪ ಅಣ್ಣೇರ್ ಇತರರು ಇದ್ದರು.