ಮಹಿಳೆಯರ ಹಬ್ಬ ಸೀಗಿ ಹುಣ್ಣಿಮೆಗೆ ಸಕ್ಕರೆ ಆರತಿ ವೈಭವ

| Published : Oct 28 2023, 01:16 AM IST

ಮಹಿಳೆಯರ ಹಬ್ಬ ಸೀಗಿ ಹುಣ್ಣಿಮೆಗೆ ಸಕ್ಕರೆ ಆರತಿ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಲ್ಲ ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಸೀಗವ್ವ ಮತ್ತು ಗೌರವ್ವನ ಮೂರ್ತಿಗಳಿಗೆ ಅ. 28ರಂದು ವಿಶೇಷವಾಗಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸೀಗಿ ಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಆರತಿ ಬೆಳಗಲು ಸೀಗವ್ವನಲ್ಲಿಗೆ ತೆರಳುವ ಸಡಗರ ಮಹಿಳೆಯರಿಗೆ ಅಚ್ಚುಮೆಚ್ಚುನಿಂಗರಾಜ ಬೇವಿನಕಟ್ಟಿ

ಕನ್ನಡಪ್ರಭ ವಾರ್ತೆ ನರೇಗಲ್ಲ

ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಸೀಗವ್ವ ಮತ್ತು ಗೌರವ್ವನ ಮೂರ್ತಿಗಳಿಗೆ ಅ. 28ರಂದು ವಿಶೇಷವಾಗಿ ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಸೀಗಿ ಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.

ಹುಣ್ಣಿಮೆಯ ದಿನದಂದು ಹಾಗೂ ಮಾರನೇ ದಿನದ ರಾತ್ರಿ ವೇಳೆಯಲ್ಲಿ ಮಹಿಳೆಯರು ಹಾಗೂ ಚಿಕ್ಕಮಕ್ಕಳು ಸೇರಿದಂತೆ ವಿವಿಧ ಬಗೆಯ ಹೂ ಮುಡಿದು, ಬಣ್ಣಬಣ್ಣದ ಸೀರೆಗಳನ್ನುಟ್ಟು, ಸಕ್ಕರೆ ಗೊಂಬೆಯ ಆರತಿಯನ್ನು ತಟ್ಟೆಯಲ್ಲಿಟ್ಟುಕೊಂಡು ಸೀಗವ್ವನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಬರುವ ಹಾದಿಯ ಮಧ್ಯ ಗ್ರಾಮೀಣ ಸೊಗಡಿನ ಜಾನಪದ ಶೈಲಿಯ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಅಕ್ಕತಂಗಿಯರಾದ ಸೀಗವ್ವ ಮತ್ತು ಗೌರವ್ವನಿಗೆ ಆರತಿ ಎತ್ತಿ ಬೆಳಗುವರು.

''''''''ಗೌರಿ ಗೌರಿ ಅಂತ... ಗಣಪತಿ ಅಂತ... ಮುತ್ತಿನ ಚಂಡ ಅಂತ ಹೋಗಿ ಬಾ ಗೌರಿ ಸಾಗಿ ಬಾ ಗೌರಿ'''''''' ಎಂದು ಹಾಡು ಹಾಡುತ್ತಾ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಸೀಗವ್ವ ಮತ್ತು ಗೌರವ್ವನಿಗೆ ಹಾಡು ಹಾಡುತ್ತಾ ಆರತಿ ಬೆಳಗಿ ಸಂಪ್ರದಾಯ ಮೆರೆಯುತ್ತಾರೆ.ಹೆಣ್ಣುಮಕ್ಕಳಿಂದ ವಿವಿಧ ಬಗೆಯ ಆಟ: ಸೀಗಿ ಹುಣ್ಣಿಮೆ ಕಾರ್ಯಕ್ಕೆಂದು ಗ್ರಾಮದ ಮಹಿಳೆಯರು ಹಾಗೂ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ಸಂಭ್ರಮದಿಂದ ಹಬ್ಬ ಆಚರಣೆ ಮಾಡುವುದರ ಜೊತೆಗೆ ಮಕ್ಕಳು, ಯುವಕರು, ಯುವತಿಯರು ಸೌಹಾರ್ದದಿಂದ ಚಂದಿರನ ಬೆಳದಿಂಗಳಲ್ಲಿ ತಮ್ಮ ನೆಚ್ಚಿನ ವಿವಿಧ ಆಟ ವಿನೋದಾವಳಿ ಪ್ರದರ್ಶಿಸಿ ನಲಿದಾಡುತ್ತಾರೆ.ಸೀಗಿ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ಹೆಂಗಳೆಯರಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತದೆ, ಹೆಣ್ಣುಮಕ್ಕಳು ವಾರಪೂರ್ತಿ ಹೊಸ ಸೀರೆ, ಉಡುಪು ಧರಿಸಿ ನಲಿದಾಡುವ ಸೀಗಿ ಹುಣ್ಣಿಮೆ ಆಚರಣೆಯ ಸಂಭ್ರಮ ಕಣ್ತುಂಬಿಕೊಳ್ಳುವುದೇ ಒಂದು ಸಂತಸ.

ಗ್ರಾಮೀಣರಲ್ಲಿ ಸಂಭ್ರಮ: ಸಕ್ಕರೆ ಗೊಂಬೆಗಳಿರುವ ತಟ್ಟೆಯಲ್ಲಿ ದೀಪ ಹಚ್ಚಿಕೊಂಡು ಸೀಗವ್ವನ ವಿಗ್ರಹಕ್ಕೆ ಆರತಿ ಎತ್ತಿ, ಆ ಬಳಿಕ ಕುಟುಂಬದ ಸದಸ್ಯರಿಗೆ ನೆರೆ ಹೊರೆಯವರಿಗೆ ಸಂಬಂಧಿಕರಿಗೆ ಆರತಿ ಬೆಳಗುವ ಸಂಪ್ರದಾಯ ಇಲ್ಲಿ ಕಾಣಬಹುದು.

ಸೀಗಿ ಹುಣ್ಣಿಮೆ ದಿನ ಸಮೀಪಿಸುತ್ತಿದ್ದಂತೆಯೇ ಸಹಜವಾಗಿ ಸಕ್ಕರೆ ಗೊಂಬೆಗಳು ನೆನಪಿಗೆ ಬರುತ್ತವೆ. ಈ ಗೊಂಬೆಗಳು ಇಲ್ಲದಿದ್ದರೆ ಹುಣ್ಣಿಮೆಯ ಆಚರಣೆಯೇ ಅಪೂರ್ಣ ಎಂಬ ಮಾತುಗಳು ಕೇಳಿಬರುತ್ತವೆ. ವಾರ ಮೊದಲೇ ಗೊಂಬೆಗಳ ತಯಾರಿಕೆಯಲ್ಲಿ ತೊಡಗುವ ಗ್ರಾಮ ಹಾಗೂ ಪಟ್ಟಣಗಳ ಅನೇಕ ಕುಟುಂಬಗಳು ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹುಣ್ಣಿಮೆಗೆ ಅಗತ್ಯವಿರುವ ಗೊಂಬೆಗಳ ತಯಾರಿಕೆ ಸಡಗರದಿಂದ ಆರಂಭಗೊಂಡಿದೆ.

ಹದವರಿತ ಕಲೆ:ಸಕ್ಕರೆ ಗೊಂಬೆಗಳ ತಯಾರಿಕೆ ಒಂದು ಕಲೆ. ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಏಲಕ್ಕಿ ಹಾಕಿ ಒಲೆ ಮೇಲೆ ಹದಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಅದನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.

ಬೆಲೆ ಏರಿಕೆಯ ಬಿಸಿ: ಆರತಿ ತಯಾರಕರು ಸಾಮಾನ್ಯವಾಗಿ ಆರತಿಯ ಬೆಲೆಯನ್ನು ಏರಿಸಿದ್ದು ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಒಂದು ಕ್ವಿಂಟಲ್ ಸಕ್ಕರೆಯಿಂದ ಆರತಿ ತಯಾರಿಸಲು ಬಳಸುವ ವಸ್ತುಗಳಿಂದ ೭೫ ರಿಂದ ೮೦ ಕೆಜಿ ಆರತಿಯನ್ನು ತಯಾರಿಸಬಹುದು. ಈ ನಿಟ್ಟಿನಲ್ಲಿ ಸಕ್ಕರೆ ಬೆಲೆಗಿಂತ ಆರತಿಯ ಬೆಲೆಯು ದ್ವಿಗುಣವಾಗುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಾರೆ ಗ್ರಾಹಕರು.

ಗೊಂಬೆಗಳು ಭಕ್ತಿಯ ಪ್ರತೀಕ:ಸಕ್ಕರೆಯಿಂದ ತಯಾರಿಸಿದ ಆರತಿಗಳಲ್ಲಿ ದೇವರ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದು, ಇದರಿಂದ ಜನತೆ ಆರತಿಯನ್ನು ಮುರಿಯದಂತೆ ನೋಡಿಕೊಳ್ಳುವುದರ ಜೊತೆಗೆ ಅವುಗಳನ್ನು ಪೂಜ್ಯನೀಯವಾಗಿ ಕಾಣುತ್ತಾರೆ.

ಪೂಜ್ಯನೀಯವಾಗಿ ಗೌರವ್ವನನ್ನು ಪೂಜಿಸಿ ಮನೆಯಲ್ಲಿ ಸಿಹಿ ಪದಾರ್ಥ ಮಾಡಿ ಎಲ್ಲರೂ ಸಂಭ್ರಮಿಸುವ ಪರಿಯನ್ನು ನಾವು ಇಂದಿಗೂ ಗ್ರಾಮೀಣ ಭಾಗದಲ್ಲಿ ಕಾಣುತ್ತೇವೆ ಎಂದು ಗ್ರಾಮಸ್ಥೆಯರಾದ ಶೋಭಾ ಬೆಟಗೇರಿ, ನಿರ್ಮಲಾ ಹಿರೇಮಠ, ಅಕ್ಕಮ್ಮ ಬೆಟಗೇರಿ ಹೇಳುತ್ತಾರೆ.