ಮೂಡುಬಿದಿರೆಯಲ್ಲಿ ವಿರಾಟ್ ಕೊಹ್ಲಿ?!
KannadaprabhaNewsNetwork | Published : Oct 28 2023, 01:15 AM IST / Updated: Oct 28 2023, 01:16 AM IST
ಮೂಡುಬಿದಿರೆಯಲ್ಲಿ ವಿರಾಟ್ ಕೊಹ್ಲಿ?!
ಸಾರಾಂಶ
ಮೂಡುಬಿದಿರೆಯಲ್ಲಿ ವಿರಾಟ್ಟ್ ಕೊಹ್ಲಿ?!
ವಿಶೇಷ ವರದಿ ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಕ್ರಿಕೆಟ್ ದೇವರು ಸಚಿನ್ ದಾಖಲೆಯನ್ನೇ ಮುರಿಯುವ ಹಂತಕ್ಕೆ ಬೆಳೆದು ಈಗ ಭಾರತದಲ್ಲೇ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ ಮೊನ್ನೆ ವಿರಾಟ್ ಕೊಹ್ಲಿ ಮೂಡುಬಿದಿರೆ ಪೇಟೆಯತ್ತ ಬಂದರಂತೆ ಎಂಬ ಸುದ್ದಿ ಹರಿದುಬಂದಾಗ ಅಷ್ಟೊಂದು ಗುಟ್ಟಿನಲ್ಲೇದಾರೂ ಬಂದು ಹೋದರೆ? ಅಂತಹದ್ದೇನಿರಬಹುದು ಎನ್ನುವ ಕುತೂಹಲವೂ ಕಾಡದಿರಲಿಲ್ಲ! ನೋಡಿದ ಹುಡುಗರೂ ಇದ್ದರು. ಹೌದು ನಾವೂ ಅಚ್ಚರಿಯಿಂದ ಕೈಬೀಸಿದಾಗ ನಕ್ಕು ವಿಶ್ ಮಾಡಿದರು ಎಂದ ಹುಡುಗಿಯರ ಗುಂಪಿನ ಮಾಹಿತಿಯ ಬೆನ್ನಟ್ಟಿ ಹೊದಾಗ ಸಿಕ್ಕಿದ್ದು ‘ಮೂಡುಬಿದಿರೆಯ ವಿರಾಟ್ ಕೊಹ್ಲಿ’! ತದ್ರೂಪಿ: ಹೌದು ಮೇಲ್ನೋಟಕ್ಕೆ ವಿರಾಟ್ ತದ್ರೂಪ ಎನ್ನಬಹುದಾದ ಚಹರೆ ಹೊಂದಿರುವ ಮೂಡುಬಿದಿರೆಯ ಸಚಿನ್ ಲಾಯ್ಡ್ ಫರ್ನಾಂಡಿಸ್ ಎಲ್ಲೇ ಹೋದರೂ ಅಲ್ಲಿದ್ದವರ ಆಕರ್ಷಣೆಯಾಗುತ್ತಿದ್ದಾರೆ. ಎಷ್ಟೋ ಕಡೆ ಹೆಚ್ಚಿನವರು ಇವರ ಚಹರೆಗೆ ಮಾರು ಹೋಗಿ ಇವರೇ ವಿರಾಟ್ ಕೊಹ್ಲಿ ಎಂದು ದಂಗಾದದ್ದೂ ಇದೆ. ಸಣ್ಣ ಉದ್ಯಮಿಯೋರ್ವ ಹೀಗೆ ಸೆಲೆಬ್ರಿಟಿಯಾಗಿ ಬದಲಾಗಲು ಕಾರಣ ಕೊಹ್ಲಿ ಎಂದರೆ ತಪ್ಪಲ್ಲ. ವೃತ್ತಿಯಲ್ಲಿ ಡಿಜೆ, ಇವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ತೊಡಗಿರುವ ಸಚಿನ್ ಕೊಹ್ಲಿಯಂತೆ ಕಾಣುತ್ತಾರೆ. ಹಾಗಾಗಿ ವಾಹನದಲ್ಲಿ ಓಡಾಡಿದಾಗ ಕೆಲವರಿಗೆ ಗೊಂದಲ ಕಾಡಿದ್ದಿದೆ. ಅಂದ ಹಾಗೆ 2019ರಲ್ಲಿ ಸಚಿನ್ ಫರ್ನಾಂಡಿಸ್ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೈಜೂಸ್ ಅವರ ಕ್ರಿಕೆಟ್ ಜಾಹೀರಾತಿನ ಚಿತ್ರೀಕರಣಕ್ಕೆ ಕೊಹ್ಲಿ ಡ್ಯೂಪ್ ಆಗಿ ಹೋದಾಗ ಅಲ್ಲಿ ಹೆಚ್ಚಿನವರು ಯಾಮಾರಿದ್ದರು. ಸ್ವತಃ ಕೊಹ್ಲಿಯವರೂ ಆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದು ಗಮನಾರ್ಹ. ಗೋವಾದಲ್ಲಿ ಸಿನಿಮಾಶೂಟಿಂಗ್ ಒಂದರಲ್ಲಿ ತೊಡಗಿದ್ದಾಗ ಅಲ್ಲಿದ್ದವರು ಇವರನ್ನು ಕೊಹ್ಲಿ ಎಂದೇ ಮುತ್ತಿಕೊಂಡರಂತೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಐಪಿಲ್ ನೋಡಲು ಹೋದಾಗಲಂತೂ ಹೆಚ್ಚಿನವರು ಇವರನ್ನು ಕಾಣಲು ಮುಗಿಬಿದ್ದರಂತೆ. ಲಾಂಗ್ ಡ್ರೈವ್ ಇಷ್ಟಪಡುವ ಸಚಿನ್ ಕೂಡಾ ಬಿಡುವಾದಾಗಲೆಲ್ಲ ಗೆಳೆಯರ ಜತೆ ಕ್ರಿಕೆಟ್ ಆಡುವುದನ್ನೇ ಇಷ್ಟಪಡುತ್ತಾರೆ. ಎಲ್ಲರೂ ನೀವು ಕೊಹ್ಲಿಯಂತೆ ಎಂದು ಪ್ರಶಂಸಿಸುತ್ತಾರೆ. ಆದರೆ ಬದುಕಿನಲ್ಲಿ ಸಹಜತೆಯೇ ಮುಖ್ಯ ಎನ್ನುವ ಸಚಿನ್ ಅದ್ಯಾವ ಬಿಗುಮಾನ ಇಲ್ಲದೇ ತನ್ನ ಪಾಡಿಗೆ ತಾನು ಎಂಬಂತಿದ್ದಾರೆ.