ಏಳೆಂಟು ವರ್ಷಗಳ ಕರ ವಸೂಲಿ ಬಾಕಿ

| Published : Oct 28 2023, 01:16 AM IST

ಸಾರಾಂಶ

ತಿ ವರ್ಷ ಬಾಡಿಗೆಯ ದರ ಏರಿಕೆ ಆಗಬೇಕು. ಆದರೆ ಬಹುತೇಕ ಕಡೆ ಆಗಿಲ್ಲ. ಎರಡು ಮಹಡಿ ಕಟ್ಟಡಕ್ಕೆ ಅನುಮತಿ ಪಡೆದು ೩-೪ ಮಹಡಿ ಕಟ್ಟುತ್ತಾರೆ. ಇಂತಹದಕ್ಕೂ ಕರ ವಸೂಲಿ ಮಾಡದಿರುವುದು ಗಮನಕ್ಕೆ ಬಂದಿದೆ
ಕಾರವಾರ: ಜಿಲ್ಲೆಯ ಎಲ್ಲ ೧೩ ನಗರ ಸ್ಥಳೀಯ ಸಂಸ್ಥೆಗಳಲ್ಲಿ ೭-೮ ವರ್ಷ ಕರ ವಸೂಲಿ ಬಾಕಿ ಇದೆ. ಬಹುತೇಕ ನೌಕರರು ತಪ್ಪು ಮಾಡಿದ್ದಾರೆ. ಇದು ಚುನಾಯಿತ ಪ್ರತಿನಿಧಿಗಳ ಗಮನಕ್ಕೂ ಇರುತ್ತದೆ. ಎಷ್ಟು ನೌಕರರ ಮೇಲೆ ಕ್ರಮ ಸಾಧ್ಯ? ಎಷ್ಟು ಸಂಸ್ಥೆಯ ಪ್ರತಿನಿಧಿಗಳ ಸದಸ್ಯತ್ವ ರದ್ದು ಮಾಡಲು ಆಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರಶ್ನಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಯ ಎಲ್ಲ ನೌಕರರು ತಪ್ಪು ಮಾಡಿದ್ದಾರೆ. ಹಾಗಿದ್ದಾಗ ಯಾರ ಮೇಲೆಂದು ಕ್ರಮಕೈಗೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸದಸ್ಯತ್ವ ರದ್ದು ಮಾಡಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಆದರೆ ಹಾಗೆ ಮಾಡುತ್ತಾ ಹೋದರೆ ಎಷ್ಟು ಸಂಸ್ಥೆಗಳ ಪ್ರತಿನಿಧಿಗಳ ಸದಸ್ಯತ್ವ ರದ್ದು ಮಾಡಲು ಸಾಧ್ಯ? ೧೦-೧೨ ವರ್ಷದಿಂದ ಅಧಿಕಾರಿಗಳು, ಸಿಬ್ಬಂದಿ ಇದ್ದಲ್ಲಿಯೇ ಇದ್ದಾರೆ. ಅವರನ್ನು ಬದಲಿಸಬೇಕು. ಜತೆಗೆ ಬಾಕಿ ಇರುವ ಕರ ವಸೂಲಿಗೆ ಆದ್ಯತೆ ಕೂಡಾ ನೀಡಲಾಗುತ್ತಿದೆ ಎಂದರು. ಪ್ರತಿ ವರ್ಷ ಬಾಡಿಗೆಯ ದರ ಏರಿಕೆ ಆಗಬೇಕು. ಆದರೆ ಬಹುತೇಕ ಕಡೆ ಆಗಿಲ್ಲ. ಎರಡು ಮಹಡಿ ಕಟ್ಟಡಕ್ಕೆ ಅನುಮತಿ ಪಡೆದು ೩-೪ ಮಹಡಿ ಕಟ್ಟುತ್ತಾರೆ. ಇಂತಹದಕ್ಕೂ ಕರ ವಸೂಲಿ ಮಾಡದಿರುವುದು ಗಮನಕ್ಕೆ ಬಂದಿದೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಿರುವ ಕರ ಸರಿಯಾಗಿ ಬಹುತೇಕ ಕಡೆ ವಸೂಲಿ ಮಾಡಿಲ್ಲ. ಕಾನೂನು ಉಲ್ಲಂಘಿಸಿ ಗುತ್ತಿಗೆ ನೀಡಿ ಕಾಮಗಾರಿ ನಡೆಸಲಾಗಿದೆ. ಇವೆಲ್ಲ ಚುನಾಯಿತ ಪ್ರತಿನಿಧಿಗಳ ಗಮನಕ್ಕಿದ್ದೇ ಆಗಿರುತ್ತದೆ. ಈಗ ನಮ್ಮ ಗಮನಕ್ಕೆ ತರದೇ ಮಾಡಿದ್ದಾರೆ ಎಂದರೆ ನಂಬಲು ಆಗುವುದಿಲ್ಲ. ದಾಖಲೆಯಲ್ಲಿ ಹಳೆ ಬಾಕಿ ಎಂದಷ್ಟೆ ಇದೆ. ಆದರೆ ಎಷ್ಟು ವರ್ಷದ್ದು ಎನ್ನುವ ಲೆಕ್ಕವಿಲ್ಲ. ದರ ಪರಿಷ್ಕರಣೆ, ವಸೂಲಿ ಯಾವುದೂ ವೈಜ್ಞಾನಿಕ ಲೆಕ್ಕಾಚಾರದಲ್ಲಿ ಆಗಿಲ್ಲ ಎಂದು ಮಾಹಿತಿ ನೀಡಿದರು. ಚತುಷ್ಪಥ ಕಾಮಗಾರಿ ಬಂದ್ ಆಗಿರುವ ಬಗ್ಗೆ ಕೇಳಿದಾಗ, ಈ ಬಗ್ಗೆ ಗಮನಕ್ಕೆ ಇಲ್ಲ. ಆ ರೀತಿ ಆಗಿದ್ದಲ್ಲಿ ಕೆಲಸ ಆರಂಭಿಸಲು ಸೂಚಿಸುತ್ತೇವೆ ಎಂದರು. ಅಕ್ರಮ ಮರಳುಗಾರಿಗೆ ತಡೆಯಲು ಇಲಾಖೆಗಳ ಮಧ್ಯೆ ಸಮನ್ವಯತೆ ಕೊರತೆ ಇದೆಯೇ ಎಂದು ಪ್ರಶ್ನಿಸಿದಾಗ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಮಾಡಬೇಕು. ಕಾನೂನು ಬಾಹಿರವಾಗಿ ಸಾಗಾಟ ಆಗುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಸಂಬಂಧಿಸಿದ ಎಲ್ಲ ಇಲಾಖೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಸಮನ್ವಯತೆ ಕೊರತೆ ಇಲ್ಲ ಎಂದ ಅವರು, ಮರಳು ದಿಬ್ಬ ಗುರುತಿಸಿದ್ದರೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.