ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ
KannadaprabhaNewsNetwork | Published : Oct 28 2023, 01:16 AM IST
ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ
ಸಾರಾಂಶ
ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ
ಕನ್ನಡಪ್ರಭ ವಾರ್ತೆ ಸಾಗರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ ನೀತಿ ಖಂಡಿಸಿ ಗುರುವಾರ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ತಾಲೂಕು ರೈತ ಸಂಘದಿಂದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ರಾಜ್ಯ ಸರ್ಕಾರ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ರೈತರ ಫಸಲು ನಾಶವಾಗುತ್ತಿದೆ. ಈಗ ರೈತರು ಫಸಲು ತೆಗೆಯುವ ಸಮಯವಾಗಿದೆ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ಜಮೀನಿಗೆ ನೀರು ಹರಿಸಲು ಆಗುತ್ತಿಲ್ಲ. ಒಂದರ್ಥದಲ್ಲಿ ಸರ್ಕಾರವೇ ರೈತರನ್ನು ಕೊಲೆ ಮಾಡುವ ಪ್ರಯತ್ನ ನಡೆಸುತ್ತಿದೆ. ಸರ್ಕಾರ ಕಮಿಷನ್ ಬರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿ, ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಿ, ರೈತರಿಗೆ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ಹಾಲಿ ಶಾಸಕರು ಅಧಿಕಾರ ಇಲ್ಲದೇ ಇರುವಾಗ ರೈತ ಸಂಘದ ಪ್ರತಿಭಟನೆಗಳಿಗೆ ಪದೇಪದೇ ಭೇಟಿ ನೀಡಿ ಫೋಟೋ ಹೊಡೆಸಿಕೊಂಡು ಪ್ರಚಾರ ಪಡೆಯುತ್ತಿದ್ದರು. ಈಗ ಅವರ ಕೈಯಲ್ಲಿ ಅಧಿಕಾರವಿದ್ದು, ಅವರ ಸರ್ಕಾರವೇ ಅಧಿಕಾರದಲ್ಲಿದೆ. ರೈತರ ವಿದ್ಯುತ್ ಸಮಸ್ಯೆ ಬಗೆಹರಿಸಲು ಮನವಿ ಸ್ವೀಕರಿಸಿ ಎಂದು ಮೂರು ಬಾರಿ ಅವರ ಕಚೇರಿಗೆ ಅಲೆದಿದ್ದೇವೆ. ಈಗ ಅವರಿಗೆ ರೈತರ ನೆನಪಾಗುತ್ತಿಲ್ಲ. ತಕ್ಷಣ ರಾಜ್ಯ ಸರ್ಕಾರ ರೈತರಿಗೆ ಏಳು ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಟಿ.ಸಿ. ಖರೀದಿ ಮತ್ತು ದುರಸ್ತಿಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವ ದೂರುಗಳಿರುವ ಹಿನ್ನೆಲೆಯಲ್ಲಿ ಅದನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ಮುಂದಿನ ಒಂದು ತಿಂಗಳಿನಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಈಗ ವಿದ್ಯುತ್ ಸಮಸ್ಯೆಯಿಂದ ನೀರು ಕೊಡದೇಹೋದಲ್ಲಿ ಕೈಗೆ ಬಂದ ಫಸಲು ಕಳೆದುಕೊಂಡು ರೈತರು ಬೀದಿಗೆ ಬೀಳಬೇಕಾಗುತ್ತದೆ. ರಾಜ್ಯ ಸರ್ಕಾರ ₹88 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿರಿಸಿದೆ ಎಂದು ಹೇಳಲಾಗುತ್ತಿದೆ. ಮಳೆಗಾಲ ಬರುವವರೆಗೆ ಗ್ಯಾರಂಟಿ ನಿಲ್ಲಿಸಿ, ವಿದ್ಯುತ್ ಖರೀದಿಸಿ ರೈತರಿಗೆ ಕೊಡಿ. ನಮಗೆ ಗ್ಯಾರಂಟಿ ಸರ್ಕಾರದ ಯೋಜನೆಗಳಡಿ ಸೌಲಭ್ಯ ಬೇಡ. ಸಮರ್ಪಕ ವಿದ್ಯುತ್ ಪೂರೈಸಿ ಸಾಕು. ರೈತರೇ ಇಲ್ಲದೆಹೋದಲ್ಲಿ ನೀವು ಯಾರಿಗೆ ಗ್ಯಾರಂಟಿ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಕೆ.ಎಂ.ಸತ್ಯನಾರಾಯಣ್, ಶಿವು ಮೈಲಾರಿಕೊಪ್ಪ ಇನ್ನಿತರರು ಮಾತನಾಡಿದರು. ತಾಲೂಕು ಅಧ್ಯಕ್ಷ ಡಾ.ರಾಮಚಂದ್ರ ಮನೆಘಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಸುರೇಶ್ ಬೆಳ್ಳಿಕೊಪ್ಪ, ಶಿವು ಬರದವಳ್ಳಿ, ವಿಜಯ ಯಲಕುಂದ್ಲಿ, ಚಂದ್ರು ಸಿರಿವಂತೆ, ಚಂದ್ರು ಆಲಳ್ಳಿ ಇನ್ನಿತರರು ಹಾಜರಿದ್ದರು. ಇದಕ್ಕೂ ಮೊದಲು ಗಣಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. - - - -27ಕೆ.ಎಸ್.ಎ.ಜಿ.1: ಸಾಗರದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಗಣಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.