ಕಲ್ಲು ಕಂಬಕ್ಕೆ ಬೈಕ್‌ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

| Published : May 13 2025, 01:19 AM IST

ಸಾರಾಂಶ

ಬೈಕ್ ಹಿಂದೆ ಕುಳಿತಿದ್ದ ನಾಗೇಶ (36)) ಹಾಗೂ ಮಂಜು (38) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮೂವರು ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರವಲಯದ ಮಳವಳ್ಳಿ ರಸ್ತೆಯ ಮರಕಾಡು ದೊಡ್ಡಿ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ಜರುಗಿದೆ.

ಮಳವಳ್ಳಿ ತಾಲೂಕು ತಮ್ಮಡಹಳ್ಳಿಯ ಈರಣ್ಣ (38) ಮೃತಪಟ್ಟ ಬೈಕ್ ಸವಾರ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತ ಸ್ಥಳದಲ್ಲಿಯೇ ಕೊನೆ ಉಸಿರೆಳೆದಿದ್ದಾನೆ. ಬೈಕ್ ಹಿಂದೆ ಕುಳಿತಿದ್ದ ನಾಗೇಶ (36)) ಹಾಗೂ ಮಂಜು (38) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಬೈಕ್ ಸವಾರ ಈರಣ್ಣ ಬೆಂಗಳೂರಿನ ಟಯೋಟ ಕಂಪನಿಗೆ ಸೇರಿದ ಟೆಂಪೋ ಟ್ರಾವೆಲರ್ಸ್ ನಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಾರ್ಯನಿಮಿತ್ತ ಸ್ವಗ್ರಾಮಕ್ಕೆ ಬಂದು ತನ್ನ ಸ್ನೇಹಿತರಾದ ಮಂಜು ಮತ್ತು ನಾಗೇಶ್ ರವರನ್ನು ಮಲ್ಲಿಗೆರೆ ಗ್ರಾಮದಿಂದ ಮದ್ದೂರು ಬಸ್ ಸ್ಟ್ಯಾಂಡಿಗೆ ಬೈಕ್ ನಲ್ಲಿ ಕರೆ ತರುತ್ತಿದ್ದಾಗ ಮದ್ದೂರು, ಮಳವಳ್ಳಿ ರಸ್ತೆಯ ಮರಕಾಡು ದೊಡ್ಡಿ ಗ್ರಾಮದ ಬಳಿ ರಸ್ತೆ ಬದಿಯ ಕಲ್ಲು ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.