ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ತೀರ್ಮಾನ ಖಂಡಿಸಿ ಅನಿರ್ದಿಷ್ಟ ಧರಣಿ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಜೂ.5 ರಂದು ರಾಜ್ಯಾದ್ಯಂತ ಬೈಕ್ ರ್‍ಯಾಲಿ ಮೂಲಕ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಈ ಮಧ್ಯೆ ಜಿಲ್ಲಾಡಳಿತ ರ್‍ಯಾಲಿ ಕೈಬಿಡುವಂತೆ ಒತ್ತಡ ಹಾಕುತ್ತಿದೆ.

ಜಿಲ್ಲಾಡಳಿತ ಭವನದ ಮುಂದೆ ಕಳೆದ 80 ದಿನಗಳಿಂದ ಜಂಗಮಕೋಟೆ ಹೋಬಳಿ ಕೈಗಾರಿಕಾ ವಲಯ ವಿರೋಧಿಸಿ ಹಮ್ಮಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘ, ದಲಿತಪರ, ಕನ್ನಡ ಪರ ಸಂಘಟನೆಗಳ ಮನವಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಜೂ.5 ರಂದು ಸುಮಾರು ಹತ್ತು ಸಾವಿರ ಬೈಕ್ ರ್‍ಯಾಲಿ ಮೂಲಕ ವಿಧಾನಸೌದ ಮುತ್ತಿಗೆಗೆ ತಯಾರಿ ನಡೆದಿದೆ. ಈ ನಡುವೆ ಮುಖ್ಯಮಂತ್ರಿ ಬದಲಾಗಿ ಇಡೀ ಸಚಿವ ಸಂಪುಟವೆ ಹೊಸದಾಗಿದೆ. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಹೊಸ್ತಿಲಲ್ಲೆ ಹೋರಾಟ ನಡೆಯುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಜಿ.ಪ್ರಭು ಮತ್ತು ಪೊಲೀಸ್ ಇಲಾಖೆ ರೈತರ ಸಭೆ ಕರೆದು ಹೋರಾಟ ಕೈಬಿಡಿ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡರಿಗೆ ಮನವಿ ಮಾಡಿದ್ದಾರೆ.

ಮನವಿ ತಿರಸ್ಕಾರ:

ಜಿಲ್ಲಾಧಿಕಾರಿಗಳ ಮನವಿ ತಿರಸ್ಕರಿಸಿದ ರೈತಸಂಘದ ಮುಖಂಡರು ಹೋರಾಟವನ್ನು ಇನ್ನಷ್ಟು ಪ್ರಬಲವಾಗಿ ನಡೆಸಲು ತಯಾರಿ ನಡೆಸಿದ್ದು, ರೈತರ ಹೋರಾಟಕ್ಕೆ ಸ್ವಾಮೀಜಿಗಳ ಬೆಂಬಲ ನೀಡಿದ್ದಾರೆ. ಈ ಹಿಂದೆ ಧರಣಿ ಸ್ಥಳಕ್ಕೆ ಬಂದು ಬೆಂಬಲ ನೀಡುವುದಾಗಿ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ ಅಂದಿನ ಹೋರಾಟಕ್ಕೆ ನಮ್ಮ ಶ್ರೀ ಮಠವು ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಇಂದು ಆನಂದ ಗುರೂಜಿ ಸಹ ಬೈಕ್ ರ್‍ಯಾಲಿಗೆ ಬೆಂಬಲ ಸೂಚಿಸಿ, ಅಂದಿನ ಹೋರಾಟಕ್ಕೆ ನಾನು ಸಹ ಬುಲೆಟ್ ತೆಗೆದುಕೊಂಡು ಭಾಗವಹಿಸಿ ಅನ್ನದಾತ ರೈತನ ಫಲವತ್ತಾದ ಬೂಮಿ ಉಳಿಸಲು ಮುಂದಡಿ ಇಡುವೆ ಎಂದು ಬೆಂಬಲ ಸೂಚಿಸಿದ್ದಾರೆ.


ಬೈಕ್ ರ್‍ಯಾಲಿ ಕುರಿತು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೈಗಾರಿಕೆ ಹೆಸರು ಹೇಳಿ ರೈತರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ. ಆದರೆ ಕಳೆದ 20 ವರ್ಷಗಳಿಂದ ಲಕ್ಷಾಂತರ ಎಕರೆ ಭೂಮಿ ಕಬಳಿಕೆಯಲ್ಲಿ ಕೇವಲ ಶೇ.25 ರಷ್ಟು ಭೂಮಿಯೂ ಕೈಗಾರಿಕೆಗೆ ಬಳಕೆಯಾಗಿಲ್ಲ, ಇದೊಂದು ಹಗಲು ದರೋಡೆ ಆಗಿದೆ ಎಂದು ಆರೋಪಿಸಿದರು.

ನಮ್ಮ ಹೋರಾಟಕ್ಕೆ ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ. ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ, ಬಿಜೆಪಿ, ಜಿಲ್ಲಾ ಜೆಡಿಎಸ್ ಇನ್ನೂ ಹಲವು ಪ್ರಗತಿಪರ ಸಂಘಟನಗಳ ನೇತೃತ್ವದಲ್ಲಿ 81ನೇ ದಿನವಾದ ಜೂ. 5 ರ ಧರಣಿ ಹೋರಾಟದ ರೈತರು ಮೋಟಾರ್ ಸೈಕಲ್ ಮೂಲಕ ಬೆಂಗಳೂರು ವಿಧಾನಸೌಧ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಅವರು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆನಂದ ಗುರೂಜಿ, ಸಂಸದ ಡಾ. ಕೆ. ಸುಧಾಕರ್, ಪ್ರಜ್ಞಾವಂತರು, ಪ್ರಗತಿಶೀಲರು, ರೈತರು ಭಾಗವಹಿಸುತ್ತಾರೆ. ಸಂಬಂಧಿಸಿದ ಅಧಿಕಾರಿ ಅಥವಾ ಮುಖ್ಯಮಂತ್ರಿಗಳೇನಾದರೂ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದಲ್ಲಿ ನಮ್ಮ ಬೈಕ್ ರ್‍ಯಾಲಿಯನ್ನು ಅರ್ಧಕ್ಕೆ ನಿಲ್ಲಿಸುವುದಾಗಿ ತಿಳಿಸಿದರು.

ಸಿಕೆಬಿ-1

ಕೆಐಡಿಬಿಗೆ ಜಮೀನು ನೀಡುವುದಕ್ಕೆ ವಿರೋಧಿಸಿ ರೈತಸಂಘದಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟ ಹೋರಾಟ ನಡೆಯುತ್ತಿದೆ.