ಸಾರಾಂಶ
ಹುಬ್ಬಳ್ಳಿ:
ದ್ವಿಚಕ್ರವಾಹನ ಕದಿಯುತ್ತಿದ್ದ ಮಹಿಳೆಯರಿಬ್ಬರು ಸೇರಿದಂತೆ ಐವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಹಿಳೆಯರೇ ಇಬ್ಬರು ಕಳ್ಳತನ ಮಾಡುತ್ತಿದ್ದರು ಎಂಬುದು ವಿಶೇಷ. ಬಂಧಿತರ ಪೈಕಿ ಇಬ್ಬರು ರೈಲ್ವೆಯಲ್ಲಿ ನೌಕರಿಯಲ್ಲಿದ್ದವರು. ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದರು.
ಇಲ್ಲಿನ ವಿದ್ಯಾನಗರ ಠಾಣೆಯ ವ್ಯಾಪ್ತಿಯ ಕಿಮ್ಸ್ ಹಿಂಭಾಗದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ರೇಷ್ಮಾ, ರವಿ, ಆಸ್ಮಾಬಾನು, ಮುಬಾರಕ ಎಂಬುವವರೇ ಬಂಧಿತರು. ಇವರಲ್ಲಿ ಆಸ್ಮಾಬಾನು, ಮುಬಾರಕ ಎಂಬಿಬ್ಬರು ರೈಲ್ವೆ ನೌಕರರು.ರೇಷ್ಮಾ ಹಾಗೂ ರವಿ ಈ ಇಬ್ಬರು ಕಿಮ್ಸ್, ಉಪನಗರ ಸೇರಿದಂತೆ ವಿವಿಧ ಜನನಿಭಿಡ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಸ್ಕೂಟಿ ಸೇರಿದಂತೆ ಮತ್ತಿತರ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡುತ್ತಿದ್ದರು. ಅವುಗಳನ್ನು ಆಸ್ಮಾಬಾನು ಹಾಗೂ ಮುಬಾರಕ ಇಬ್ಬರು ನಕಲಿ ನಂಬರ್ ಪ್ಲೇಟ್ ಹಚ್ಚಿ ಗ್ರಾಹಕರನ್ನು ಹುಡುಕಿ ಮಾರಾಟ ಮಾಡುತ್ತಿದ್ದರು. ಆ ವಾಹನದ ಓನರ್ ಕಡೆಯೇ ಆ ದ್ವಿಚಕ್ರವಾಹನ ಹೋದರೂ ಗುರುತಿಸಲಾಗದಂತೆ ಬದಲಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಇವರು ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ಫುಟೇಜ್ ಬಳಸಿ ಅವರನ್ನು ಬಂಧಿಸಲಾಗಿದೆ.ವಿದ್ಯಾನಗರ ಠಾಣೆಯಲ್ಲಿನ 7, ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ 3, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಠಾಣೆಯಲ್ಲಿ ತಲಾ ಒಂದು ಹೀಗೆ 12 ಪ್ರಕರಣಗಳಲ್ಲಿ 12 ದ್ವಿಚಕ್ರವಾಹನ ಇವರಿಂದ ವಶಕ್ಕೆ ಪಡೆಯಲಾಗಿದೆ. ಮುಬಾರಕ ವಿರುದ್ಧ ಸವಣೂರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಇದನ್ನು ಹೊರತುಪಡಿಸಿದರೆ ಉಳಿದ ಮೂವರ ಮೇಲೆ ಎಲ್ಲೂ ಪ್ರಕರಣ ದಾಖಲಾಗಿಲ್ಲ.
ಇನ್ನೂ ಎಷ್ಟು ದ್ವಿಚಕ್ರವಾಹನಗಳನ್ನು ಕದ್ದು ಮಾರಿದ್ದಾರೆ ಎಂಬುದರ ತನಿಖೆ ನಡೆದಿದೆ. ತನಿಖೆ ಮುಗಿದ ಬಳಿಕ ಸತ್ಯಾಂಶ ಹೊರಬರಲಿದೆ. ಮಹಿಳೆಯರೇ ಕಳ್ಳತನ ಮಾಡುತ್ತಿದ್ದರು. ಅದರಲ್ಲೂ ರೈಲ್ವೆಯಲ್ಲಿ ನೌಕರಿ ಇದ್ದ ಇಬ್ಬರು ಕಳ್ಳತನದಲ್ಲಿ ಶಾಮೀಲಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿಯೇ ಕಳ್ಳತನ ಮಾಡುತ್ತಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಕಮಿಷನರ್ ಹೇಳಿದ್ದಾರೆ.ಡಿಸಿಪಿ ಮಹಾಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಎಸಿಪಿ ಶಿವಪ್ರಕಾಶ ನಾಯ್ಕ್, ವಿದ್ಯಾನಗರದ ಠಾಣೆ ಪಿಐ ಜಯಂತ ಗೌಳಿ, ಪಿಎಸ್‌ಐಗಳಾದ ಭೀಮಣ್ಣ ಸಾತಣ್ಣವರ, ಶ್ರೀಮಂತ ಹುಣಸಿಕಟ್ಟಿ ಹಾಗೂ ಸಿಬ್ಬಂದಿ ಪರಶುರಾಮ ಹಿರಗಣ್ಣವರ, ಶಿವಾನಂದ ತಿರಕಣ್ಣವರ, ಮಲ್ಲಿಕಾರ್ಜುನ ಧನಗೊಂಡ, ಸೈಯದಅಲಿ ತಹಸೀಲ್ದಾರ್, ರಾಜು ಗುಂಜಾಳ, ಮಂಜು ಏಣಗಿ, ಪ್ರಕಾಶ ಠಕ್ಕಣ್ಣವರ, ಅಕ್ಕಮಹಾದೇವಿ ಹರೀಶೆಟ್ಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂಡದ ಕಾರ್ಯವನ್ನು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ ಶ್ಲಾಘಿಸಿದ್ದಾರೆ.