ಬಿಬಿಎಂಪಿಯನ್ನು ವಿಭಾಗ ಮಾಡುವ ಮಸೂದೆ : ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಒಪ್ಪಿಗೆ

| N/A | Published : Mar 11 2025, 02:01 AM IST / Updated: Mar 11 2025, 04:50 AM IST

ಬಿಬಿಎಂಪಿಯನ್ನು ವಿಭಾಗ ಮಾಡುವ ಮಸೂದೆ : ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಒಪ್ಪಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತ ವೀಕೆಂದ್ರಿಕರಣದ ಕಾರಣ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಮಹಾನಗರ ಪಾಲಿಕೆ ವರೆಗೆ ವಿಭಜಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ- 2024ಕ್ಕೆ’ ಪ್ರತಿಪಕ್ಷಗಳ ತೀವ್ರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆಯೂ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

 ವಿಧಾನಸಭೆ : ಆಡಳಿತ ವೀಕೆಂದ್ರಿಕರಣದ ಕಾರಣ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಏಳು ಮಹಾನಗರ ಪಾಲಿಕೆ ವರೆಗೆ ವಿಭಜಿಸುವ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ- 2024ಕ್ಕೆ’ ಪ್ರತಿಪಕ್ಷಗಳ ತೀವ್ರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆಯೂ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

ಈ ವಿಧೇಯಕದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಪ್ರತಿ ವರ್ಷ ತನ್ನ ವ್ಯಾಪ್ತಿಯ ಎಲ್ಲಾ ಪಾಲಿಕೆಗಳ ಬಜೆಟ್ ಸಿದ್ಧಪಡಿಸುವ, ಯಾವುದೇ ಮೊತ್ತದ ಸಾಲ ಪಡೆಯಲು ಅಧಿಕಾರ ಪಡೆಯಲಿದೆ. ಜತೆಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಆಸ್ತಿಗಳನ್ನು ತನ್ನ ಹೆಸರಿನಲ್ಲಿ ಹೊಂದುವ, ಧಾರಣ ಮಾಡುವ, ವಿಲೆ ಮಾಡುವ ಹಾಗೂ ಕರಾರು ಮಾಡಿಕೊಳ್ಳುವ ಅಧಿಕಾರ ಪಡೆಯಲಿದೆ.

ವಿಧೇಯಕ ಮಂಡಿಸಿದ ಕೂಡಲೇ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಮರಣ ಶಾಸನ ಆಗಲಿದೆ. ಪಾಲಿಕೆಗಳ ಅಧಿಕಾರ ಮುಖ್ಯಮಂತ್ರಿ ಅಥವಾ ನಗರಾಭಿವೃದ್ಧಿ ಸಚಿವರಿಗೆ ಸೇರಿ ಪಾಲಿಕೆಗಳು ಅಧಿಕಾರ ಕಳೆದುಕೊಳ್ಳಲಿದೆ. ಪಾಲಿಕೆ ಪಾಲಿಕೆಗಳ ನಡುವೆ ಅನುದಾನ, ಕುಡಿಯುವ ನೀರಿಗೂ ಯುದ್ಧಗಳಾಗುತ್ತವೆ. ಬೆಂಗಳೂರನ್ನು ಛಿದ್ರ ಛಿದ್ರ ಮಾಡಿ ಕನ್ನಡಿಗರನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡುವಂತಾಗಲಿದೆ. ಭವಿಷ್ಯದಲ್ಲಿ ವಿವಿಧ ಪಾಲಿಕೆಗಳು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾಗಲಿವೆ. ಬೆಂಗಳೂರಿನ ಶಾಪ ನಿಮಗೆ ತಟ್ಟಲಿದೆ ಎಂದು ಕಿಡಿ ಕಾರಿದರು.

ಇನ್ನು ಬೆಂಗಳೂರಿಗೆ ರಾಷ್ಟ್ರಪತಿಯಿಂದ ಹಿಡಿದು ಯಾವುದೇ ಅತಿ ಗಣ್ಯ ವ್ಯಕ್ತಿಗಳು ಬಂದರೂ ಮಹಾಪೌರರು ಹೋಗಿ ಸ್ವಾಗತಿಸಬೇಕು. ಪಾಲಿಕೆಗಳು ಇಬ್ಬಾಗವಾದರೆ ಸ್ವಾಗತಿಸಲೂ ಜಗಳ ಆಗುತ್ತದೆ. ಕೆಲವು ಪ್ರದೇಶದಲ್ಲಿ ಆದಾಯ ಇಲ್ಲ ಕೆಲವು ಪ್ರದೇಶದಲ್ಲಿ ಯತೇಚ್ಛ ಆದಾಯ ಇದೆ. ಇದನ್ನು ಸಮನಾಗಿ ಹಂಚಲೂ ಸಹ ಹರಸಾಹಸ ಪಡಬೇಕು ಎಂದು ಅಸಮಾಧಾನ ಹೊರ ಹಾಕಿದರು.

ಬಳಿಕವೂ ವಿಧೇಯಕವನ್ನು ಬಲವಾಗಿ ಸಮರ್ಥಿಸಿಕೊಂಡ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿಧೇಯಕವು ಬೆಂಗಳೂರು ಅಭಿವೃದ್ಧಿಗೆ ನೆರವಾಗುತ್ತದೆಯೇ ಹೊರತು ಯಾವುದೇ ಸಮಸ್ಯೆಯಾಗಲ್ಲ. ಇದು ಪ್ರತಿಪಕ್ಷದವರಿಗೆ ಗೊತ್ತಿದ್ದರೂ ರಾಜಕೀಯವಾಗಿ ವಿರೋಧಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಪಾಲಿಕೆಗಳಿಗೆ ಸರ್ಕಾರದಿಂದ ನೆರವು ನೀಡುತ್ತೇವೆ. ಬೆಂಗಳೂರಿನ ಬಗ್ಗೆ ಮುಖ್ಯಮಂತ್ರಿಗಳಿಗೂ ಜವಾಬ್ದಾರಿ ಇರಬೇಕು. ಮುಂಬೈ, ದೆಹಲಿ ಪಾಲಿಕೆಗಳ ಸ್ಥಿತಿಯೇ ಬೇರೆ ಬೆಂಗಳೂರಿನ ಸ್ಥಿತಿಯೇ ಬೇರೆ. ಬೆಳೆಯುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಪಾಲಿಕೆಗಳಿಗೆ ಹೆಚ್ಚು ಹೊಣೆಗಾರಿಕೆ ನೀಡುತ್ತೇವೆ ಎಂದು ಹೇಳಿದರು.

ಅಂತಿಮವಾಗಿ ವಿಧೇಯಕವನ್ನು ವಿರೋಧಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. ಅದರ ನಡುವೆಯೇ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ಇದಕ್ಕೂ ಮೊದಲು ಪ್ರತಿಪಕ್ಷ ನಾಯಕ ಆರ್.ಅಶೋಕ್‌, ಬಿಜೆಪಿ ಸದಸ್ಯರಾದ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಎನ್‌.ಗೋಪಾಲಯ್ಯ, ಮುನಿರತ್ನ, ಸತೀಶ್‌ ರೆಡ್ಡಿ, ಎಸ್‌.ಆರ್‌.ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಸದಸ್ಯರೇ ಆದ ಎಸ್.ಟಿ.ಸೋಮಶೇಖರ್‌ ವಿಧೇಯಕವನ್ನು ಶ್ಲಾಘಿಸಿದರು. ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ಎನ್‌.ಎ.ಹ್ಯಾರಿಸ್‌ ವಿಧೇಯಕ ಬೆಂಬಲಿಸಿದರು.

ಬಿಜೆಪಿ ಸದಸ್ಯರ ಒಮ್ಮತ: ಡಿಕೆಶಿ

ವಿಧೇಯಕದ ಉದ್ದೇಶ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್‌, ಕಳೆದ ವರ್ಷವೇ ಸದನದಲ್ಲಿ ವಿಧೇಯಕ ಮಂಡಿಸಿ ಉದ್ದೇಶ ವಿವರಿಸಲಾಗಿತ್ತು. ಜಂಟಿ ಸದನ ಸಮಿತಿಗೆ ನೀಡುವಂತೆ ಹೇಳಿದ ಕಾರಣ ಪ್ರತಿಪಕ್ಷ ಸದಸ್ಯರನ್ನೂ ಒಳಗೊಂಡಂತೆ ಸಮಿತಿ ರಚಿಸಲಾಗಿತ್ತು. ಆ ಸಮಿತಿ ನೀಡಿದ ವರದಿ ಆಧರಿಸಿಯೇ ಪಾಲಿಕೆ ವಿಭಜನೆಗೆ ವಿಧೇಯಕ ಮಂಡಿಸಿದ್ದೇವೆ. ಬಹುತೇಕ ಬಿಜೆಪಿ ಸದಸ್ಯರಿಗೆ ಇದರ ಬಗ್ಗೆ ಒಮ್ಮತ ಇದೆ. ಆದರೆ ರಾಜಕೀಯ ಇಚ್ಛಾಸಕ್ತಿಗಾಗಿ ವಿರೋಧಿಸುತ್ತಿದ್ದಾರೆ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ. ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಆಡಳಿತಕ್ಕೆ ದೊಡ್ಡ ಸಮಸ್ಯೆ ಎಂಬ ಅರಿವು ಅವರಿಗಿದೆ. ಬೆಂಗಳೂರು ನಗರ ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇಷ್ಟೇ ಎಂದರು.

ನಾವು ಬೆಂಗಳೂರನ್ನು ಛಿದ್ರ ಮಾಡಲು ಹೋಗುತ್ತಿಲ್ಲ, ಬೆಂಗಳೂರನ್ನು ಗಟ್ಟಿ ಮಾಡುತ್ತಿದ್ದೇವೆ. ಆರ್ಥಿಕವಾಗಿ ದುರ್ಬಲವಾಗುವ ಪಾಲಿಕೆಗಳಿಗೆ ಸರ್ಕಾರದಿಂದ ಅನುದಾನ ನೀಡುವ ಕುರಿತು ಮಸೂದೆಯಲ್ಲಿ ಪ್ರಸ್ತಾಪಿಸಿದ್ದೇವೆ. ಅದರಿಂದ ಪಾಲಿಕೆಗಳಲ್ಲಿನ ಆರ್ಥಿಕ ಅಸಮತೋಲನ ನಿವಾರಣೆಯಾಗಲಿದೆ. ಇನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಸ್ಥರಾಗುವ ಮುಖ್ಯಮಂತ್ರಿಗಳು ಪ್ರತಿ 3 ತಿಂಗಳಿಗೊಮ್ಮೆ ಸಭೆ ಮಾಡಲೇಬೇಕು ಎಂಬುದು ವಿಧೇಯಕದಲ್ಲಿದೆ. ಮುಖ್ಯಮಂತ್ರಿಯಾದವರು ಕೇವಲ ನಗರ ಪ್ರದಕ್ಷಿಣೆ ಹಾಕಿದರೆ ಸಾಲದು ಎಂಬುದನ್ನು ವಿಧೆಯಕದ ಮೂಲಕ ತಿಳಿಸಲಾಗಿದೆ ಎಂದರು.

ಬಿಜೆಪಿಯಲ್ಲಿ ಸಮನ್ವಯತೆ ಕೊರತೆ

ವಿಧೇಯಕದ ಕುರಿತು ಚರ್ಚೆ ವೇಳೆ ಬಿಜೆಪಿ ಶಾಸಕರ ಅಭಿಪ್ರಾಯ ಭಿನ್ನವಾಗುವ ಮೂಲಕ ಸಮನ್ವಯ ಕೊರತೆ ಎದ್ದು ಕಾಣುವಂತಿತ್ತು. ಬಹುತೇಕ ಬಿಜೆಪಿ ಶಾಸಕರು ವಿಧೇಯಕವನ್ನು ಒಪ್ಪಿದರೂ, ಬಿಬಿಎಂಪಿ ವಿಭಜನೆಯನ್ನು ವಿರೋಧಿಸಿದರು. ಆದರೆ, ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್ ವಿಧೇಯಕದ ಪ್ರತಿ ಅಂಶವನ್ನೂ ಸ್ವಾಗತಿಸಿದರು. ಅಲ್ಲದೆ, ವಿಧೇಯಕ ವಿರೋಧಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರೂ, ಸೋಮಶೇಖರ್ ಮಾತ್ರ ತಮ್ಮ ಆಸನದಲ್ಲಿಯೇ ಕುಳಿತಿದ್ದರು. ಅದನ್ನು ನೋಡಿದ ಬಿಜೆಪಿ ಶಾಸಕ ಸುರೇಶ್ ಗೌಡ, ನೀನು ಪ್ರತ್ಯೇಕವಾಗಿ ಕುರ್ಚಿ ಹಾಕಿಸಿಕೊಂಡು ಕುಳಿತುಕೋ ಎಂದು ಕಿಡಿ ಕಾರಿದರು. ಈ ವೇಳೆ ಸೋಮಶೇಖರ್, ನನಗೆ ಗೊತ್ತಿದೆ ನೀನು ಹೋಗು ಎಂದು ತಿರುಗೇಟು ನೀಡಿದರು.

ಅಷ್ಟೇ ಅಲ್ಲದೆ, ವಿಧೇಯಕದ ಬಗ್ಗೆ ಮಾತನಾಡುವಾಗ, ಬಿಜೆಪಿಯ ಮುನಿರತ್ನ ಸುರಂಗ ಮಾರ್ಗ, ಡಬಲ್‌ ಡೆಕ್ಕರ್‌ ಯೋಜನೆಗಳನ್ನು ವಿರೋಧಿಸಿ ಮಾತನಾಡಿದರೆ. ಎಸ್‌.ಆರ್‌. ವಿಶ್ವನಾಥ್‌ ಹಾಗೂ ಸತೀಶ್‌ ರೆಡ್ಡಿ ಯೋಜನೆಗಳನ್ನು ಸ್ವಾಗತಿಸಿದರು. ಸತೀಶ್‌ ರೆಡ್ಡಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುರಂಗ ಮಾರ್ಗದ ನೋಟಿಫಿಕೇಷನ್‌ ಯಾವಾಗ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಅದೇ ರೀತಿ ಸತೀಶ್‌ ರೆಡ್ಡಿ ಹಾಗೂ ಎಂ.ಕೃಷ್ಣ ಅವರಿಂದ ಎಲೆಕ್ಟ್ರಾನಿಕ್‌ ಸಿಟಿಯನ್ನೂ ಗ್ರೇಟರ್‌ ಬೆಂಗಳೂರು ವ್ಯಾಪ್ತಿಗೆ ತರುವಂತೆ ಆಗ್ರಹಿಸಿದರು. ಇದಕ್ಕೆ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ಎಲೆಕ್ಟ್ರಿನಿಕ್‌ ಸಿಟಿಯಿಂದ ದೇಶಕ್ಕೆ ಹೆಸರು ಬಂದಿದೆ. ಅದನ್ನು ಪ್ರತ್ಯೇಕವಾಗಿ ಬಿಟ್ಟುಬಿಡಿ ಎಂದರು. ಆಗ, ಕೃಷ್ಣಪ್ಪ, ಡಾ. ಅಶ್ವತ್ಥ ನಾರಾಯಣ ಅವರಿಗೆ ಅವರ ಕ್ಷೇತ್ರವಾದ ಮಲ್ಲೇಶ್ವರ ಸಮಸ್ಯೆಗಳ ಬಗ್ಗೆ ಗೊತ್ತಿರಬೇಕು. ನನಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಮಸ್ಯೆ ಬಗ್ಗೆ ತಿಳಿಸಿದೆ. ಎಲೆಕ್ಟ್ರಾನಿಕ್‌ ಸಿಟಿ ನನ್ನ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಅದರಿಂದಾಗುತ್ತಿರುವ ಸಮಸ್ಯೆ ಕುರಿತು ನನಗೆ ಮಾತ್ರ ಮಾಹಿತಿಯಿದೆ ಎಂದು ಸದನದಲ್ಲೇ ಆಕ್ಷೇಪ ವ್ಯಕ್ತಪಡಿಸಿದರು.

ಮತ್ತಷ್ಟು ಅಭಿವೃದ್ಧಿ ಸಾಧ್ಯ

ತಮಿಳು, ತೆಲುಗು ಭಾಷಿಗರು, ಹೊರ ರಾಜ್ಯ, ಜಿಲ್ಲೆಯವರು ಬೆಂಗಳೂರಿನ ಮೇಯರ್‌ ಆಗುತ್ತಾರೆ ಎಂಬ ವಾದ ಒಪ್ಪಲಾಗದು. ಈಗಾಗಲೇ ಎಲ್ಲರೂ ಮೇಯರ್‌ ಆಗಿದ್ದಾರೆ. ಕುರಿ ಕಾಯುವವನೂ ಮುಖ್ಯಮಂತ್ರಿಯಾಗಬಹುದು, ಟೀ ಮಾರುವವನು ಪ್ರಧಾನಿಯಾಗಬಹುದು. ಹೀಗೆ ಯಾರು ಬೇಕಾದರೂ ಮೇಯರ್‌ ಆಗಬಹುದು. ಗ್ರೇಟರ್‌ ಬೆಂಗಳೂರು ವಿಧೇಯಕ ಬೆಂಗಳೂರಿನ ಅಭಿವೃದ್ಧಿ ಪೂರಕವಾಗಿದೆ. ಈಗಿನ ರಾಜ್ಯ ಸರ್ಕಾರ ಬೆಂಗಳೂರಿಗೆ ಅತಿಹೆಚ್ಚು ಅನುದಾನ ನೀಡಿದ್ದು, ಮುಂದೆ ನೂತನ ವಿಧೇಯಕದಿಂದ ಮತ್ತಷ್ಟು ಅಭಿವೃದ್ಧಿಯಾಗಲಿದೆ.

-ಎಸ್‌.ಟಿ.ಸೋಮಶೇಖರ್‌, ಬಿಜೆಪಿ ಶಾಸಕ.