ಸಾರಾಂಶ
ಉಮಾ ಮಹೇಶ್ವರಿ ಸಭಾ ಭವನದಲ್ಲಿ ರಾಣಿ ದುರ್ಗಾವತಿ 500 ನೇ ಜಯಂತಿ, ಭಗವಾನ್ ಬಿರ್ಸಾ ಮುಂಡಾ 150 ನೇ ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಗವಾನ್ ಬಿರ್ಸಾ ಮುಂಡ ಅವರು ಆದಿವಾಸಿಗಳ ಸ್ವಾಭಿಮಾನದ ಪ್ರತೀಕವಾಗಿದ್ದಾರೆ ಎಂದು ವನವಾಸಿ ಕಲ್ಯಾಣ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದರು.
ಭಾನುವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ಜಿಲ್ಲಾ ವನವಾಸಿ ಕಲ್ಯಾಣ ಸಮಿತಿ ಆಯೋಜನೆ ಮಾಡಿದ್ದ ರಾಣಿ ದುರ್ಗಾವತಿ 500 ನೇ ಜಯಂತಿ ಹಾಗೂ ಭಗವಾನ್ ಬಿರ್ಸಾ ಮುಂಡ ಅವರ 150ನೇ ಜಯಂತಿ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ರಾಣಿ ದುರ್ಗಾವತಿ ಮೊಘಲರ ವಿರುದ್ಧ ಹೋರಾಟ ಮಾಡಿ ತನ್ನ ಜನರ ಉಳಿವಿಗೆ ಪ್ರಾಣವನ್ನೇ ತ್ಯಾಗ ಮಾಡಿದ ವೀರ ವನಿತೆಯಾಗಿದ್ದಾಳೆ. ಸಮರ್ಪಣೆಯಿಂದ ಮನುಷ್ಯನಿಗೆ ಮೋಕ್ಷ ಸಿಗುತ್ತದೆ. ಭಗವಂತನ ಸ್ಮರಣೆಯಾದ ಭಜನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಉಲ್ಲಾಸ ಸಿಗುತ್ತದೆ. ಮನುಷ್ಯ ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ ಹೇಗೆ ಬದುಕಿದ್ದ ? ಎನ್ನುವುದು ಬಹಳ ಮುಖ್ಯವಾಗುತ್ತದೆ. ಪ್ರಸ್ತುತ ಸಮಾಜ ಒಂದಾಗಬೇಕು. ತನ್ನಲ್ಲಿರುವ ಮೇಲು, ಕೀಳು, ಅಸಮಾನತೆ, ಕೀಳರಿಮೆಯನ್ನು ತೊಡೆದು ಹಾಕಿ ಸಮಾಜ ಒಂದಾಗಿ ಬಾಳಬೇಕು. ತ್ಯಾಗ, ಸಮರ್ಪಣೆ, ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಕರೆ ನೀಡಿದರು.
ಅತಿಥಿಯಾಗಿದ್ದ ರಾಜ್ಯ ವನವಾಸಿ ಕಲ್ಯಾಣ ಸಮಿತಿ ಶಿಕ್ಷಣ ಪ್ರಮುಖ್ ರಾಮಚಂದ್ರ ಮಾತನಾಡಿ, ಈ ದೇಶದ ಎಲ್ಲಾ ವನವಾಸಿಗಳು ಭಾರತ ದೇಶದ ಮೂಲ ನಿವಾಸಿಗಳಾಗಿದ್ದಾರೆ. ಕರ್ನಾಟಕದಲ್ಲಿ ವನವಾಸಿ ಕಲ್ಯಾಣ ಸಮಿತಿ 1988ರಲ್ಲಿ ಮೈಸೂರಿನಲ್ಲಿ ಪ್ರಾರಂಭವಾಯಿತು. ನಂತರ 2017ರಲ್ಲಿ ಚಿಕ್ಕಮಗಳೂರಿನಲ್ಲಿ ಪ್ರಾರಂಭವಾಯಿತು. ಗುಡ್ಡಗಾಡ ಪ್ರದೇಶದ ಜನರಿಗೆ ಶಿಕ್ಷಣ ,ಆರೋಗ್ಯ ದಂತಹ ಮೂಲಭೂತ ಸೌಕರ್ಯ ದೊರಕಿಸಿ ಕೊಟ್ಟು ವನವಾಸಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತುರುವುದೇ ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯದಲ್ಲಿ 217 ಮನೆ ಪಾಠದ ಶಾಲೆಗಳಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 17 ಮನೆ ಪಾಠಗಳಿವೆ. ಶಾಲೆ ಮೂಲಕ ಮಕ್ಕಳಿಗೆ ಗುರು ಹಿರಿಯರ ಮೇಲೆ ಗೌರವ, ಸಂಸ್ಕಾರ, ಸಂಸ್ಕೃತಿ ಯನ್ನು ಕಲಿಸಿಕೊಡಲಾಗುತ್ತದೆ. ವನವಾಸಿ ಕಲ್ಯಾಣ ಸಮಿತಿಯಿಂದ ರಾಜ್ಯದಲ್ಲಿ 408ಕ್ಕೂ ಹೆಚ್ಚು ಕಂಪ್ಯೂಟರ್ ತರಬೇತಿ, ಕೃಷಿ, ಶಿಕ್ಷಣ, ಆರೋಗ್ಯ ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳಿವೆ. ಇದರಲ್ಲಿ ಎಷ್ಟೋ ಜನ ಯಾವುದೇ ಪ್ರತಿ ಫಲಾಫೇಕ್ಷೆಯಿಲ್ಲದೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಮನೆಯಿಂದ ಹೊರಗೆ ಬಂದಾಗ ಮಾತ್ರ ಹೊರ ಪ್ರಪಂಚದ ಅರಿವು ಪಡೆಯಲು ಸಾಧ್ಯ ವಾಗುತ್ತದೆ. ಪ್ರತಿಯೊಬ್ಬರೂ ಪುಸ್ತಕ, ದಿನ ಪತ್ರಿಕೆ ಓದಬೇಕು. ಉತ್ತಮ ಶಿಕ್ಷಣ ಪಡೆಯಬೇಕು. ಆಗ ಜ್ಞಾನಾರ್ಜನೆಗೆ ಅವಕಾಶ ಸಿಗಲಿದೆ. ಮಹಿಳೆಯರು ಇಂದು ಜಾಗೃತರಾಗಿ, ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ವನವಾಸಿ ಸಮಿತಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಮಾತನಾಡಿ, ವನವಾಸಿಗಳ ಸಂಸ್ಕಾರ, ಸಂಸ್ಕೃತಿ ಆಚರಣೆಗಳು ಪ್ರಕೃತಿಗೆ ಹತ್ತಿರವಾಗಿದೆ. ವನವಾಸಿಗಳು ಪ್ರಕೃತಿ ಆರಾಧಕರೂ ಆಗಿದ್ದಾರೆ. ಕಾಡಿನ ಕಿರುಉತ್ಪನ್ನಗಳ ಸಂಗ್ರಹಣೆ ಮೂಲಕ ಜೀವನ ನಡೆಸಿಕೊಂಡು ಬಂದಿದ್ದಾರೆ. ಕೊಪ್ಪದ ಲ್ಯಾಂಪ್ಸ್ ಸಹಕಾರ ಸಂಘ ಗಿರಿಜನರ ಕಲ್ಯಾಣಕ್ಕಾಗಿಯೇ ಇದೆ. ಸುಮಾರು 4 ಸಾವಿರಕ್ಕೂ ಹೆಚ್ಚು ಗಿರಿಜನರು ಸದಸ್ಯರಾಗಿದ್ದಾರೆ. ರಾಜ್ಯದ 23 ಲ್ಯಾಂಪ್ಸ್ ಸಹಕಾರ ಸಂಘಗಳ ಪೈಕಿ ಕೊಪ್ಪದ ಲ್ಯಾಂಪ್ಸ್ ಸೊಸೈಟಿ ಪ್ರಥಮ ಸ್ಥಾನದಲ್ಲಿದೆ. ವನವಾಸಿ ಕಲ್ಯಾಣ ಸಮಿತಿ ಗಿರಿಜನರ ಮಕ್ಕಳ ಶಿಕ್ಷಣಕ್ಕಾಗಿ ಮೈಸೂರಿನಲ್ಲಿ ಉಚಿತವಾಗಿ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದೆ ಎಂದರು.ಲಲಿತ ಭಜನಾ ಮಂಡಳಿಗೆ ಪ್ರಥಮ ಸ್ಥಾನ : ಇದೇ ಸಂದರ್ಭದಲ್ಲಿ ವನವಾಸಿ ಕಲ್ಯಾಣ ಸಮಿತಿಯಿಂದ ನಡೆದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅಗ್ರಹಾರದ ಲಲಿತ ಭಜನಾ ಮಂಡಳಿ ಪ್ರಥಮ ಸ್ಥಾನ, ನ.ರಾ.ಪುರದ ಶ್ರೀ ಶಾರದಾ ಭಜನಾ ಮಂಡಳಿ ದ್ವಿತೀಯ ಸ್ಥಾನ ಹಾಗೂ ಹಾಗೂ ಬಿ.ಎಚ್.ಕೈಮರದ ಕರ್ನಾಟಕ ರಕ್ಷಣಾ ವೇದಿಕೆ ಭಜನಾ ತಂಡ ತೃತೀಯ ಸ್ಥಾನ ಪಡೆಯಿತು.
ಸಭೆ ಅಧ್ಯಕ್ಷತೆಯನ್ನು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಎಸ್.ಸಿ, ಎಸ್.ಟಿ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಮಹೇಶ್ ಉಪಸ್ಥಿತರಿದ್ದರು. ವನವಾಸಿ ಜಿಲ್ಲಾ ಕಾರ್ಯದರ್ಶಿ ಜಯರಾಂ ಸ್ವಾಗತಿಸಿದರು. ಭಾನುಮತಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ವಂದಿಸಿದರು.