ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ನಾಮಪತ್ರ ಸಲ್ಲಿಕೆ

| Published : Oct 26 2024, 01:04 AM IST

ಸಾರಾಂಶ

ಸಂಡೂರು ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಗೆಲುವು ಪಕ್ಷದ ಮುಂದಿನ ಗೆಲುವುಗಳಿಗೆ ಮುನ್ನುಡಿ ಬರೆಯಲಿದೆ.

ಸಂಡೂರು: ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಶುಕ್ರವಾರ ಪಕ್ಷದ ವಿವಿಧ ಮುಖಂಡರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ, ಚುನಾವಣಾಧಿಕಾರಿ ರಾಜೇಶ್ ಎಚ್.ಡಿ. ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ಮಾತನಾಡಿದ ಅಭ್ಯರ್ಥಿ ಬಂಗಾರು ಹನುಮಂತ, ಬಿಜೆಪಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿಯಾದ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸಿದ್ಧ. ಈ ಗೆಲುವು ಇತಿಹಾಸವನ್ನು ಸೃಷ್ಟಿಸಲಿದೆ ಎಂದು ತಿಳಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಸಂಡೂರು ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ಗೆಲುವು ಪಕ್ಷದ ಮುಂದಿನ ಗೆಲುವುಗಳಿಗೆ ಮುನ್ನುಡಿ ಬರೆಯಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಬಿಜೆಪಿಯ ವೈಭವ ಮರುಕಳಿಸಲಿದೆ. ಕ್ಷೇತ್ರದಲ್ಲಿ ಯಾವುದೇ ಆಪರೇಷನ್ ಅಗತ್ಯವಿಲ್ಲ. ಕ್ಷೇತ್ರದ ಜನತೆ ಸ್ವಯಂಪ್ರೇರಿತರಾಗಿ ಮುಂದೆ ಬಂದು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿಯಾಗಿದೆ. ಇದನ್ನು ಜನರ ಮುಂದೆ ಇಡುತ್ತಿದ್ದೇವೆ ಎಂದರು.

ಮಾಜಿ ಸಂಸದ ಅನಿಲ್‌ ಲಾಡ್ ಮಾತನಾಡಿ, ರಾಹುಲ್ ಗಾಂಧಿ ಭಾರತ್ ಜೋಡೊ ಕಾರ್ಯಕ್ರಮದಡಿ ಬಳ್ಳಾರಿಗೆ ಬಂದಾಗ, ಸಿದ್ದರಾಮಯ್ಯನವರು ನನ್ನನ್ನು ರಾಹುಲ್‌ ಗಾಂಧಿಯವರಿಗೆ ಪರಿಚಯಿಸುತ್ತಾ, ನನ್ನ ಬಗ್ಗೆ ಉತ್ತಮ ಅಭಿಪ್ರಾಯವ್ಯಕ್ತಪಡಿಸಿದ್ದರು. ನಂತರ ಚುನಾವಣೆ ಬಂದಾಗ, ನನಗೆ ಸಿಗಬೇಕಿದ್ದ ಟಿಕೆಟ್‌ನ್ನು ₹೨೦ ಕೋಟಿಗೆ ಮಾರಿಕೊಂಡರು. ನಾನು ಸಂಸದನಾಗಿದ್ದಾಗ, ಸಂಸದರ ಅನುದಾನದಲ್ಲಿ ಕ್ಷೇತ್ರಕ್ಕೆ ₹೧.೯೦ ಕೋಟಿ ಅನುದಾನ ನೀಡಿದ್ದೆ. ಆದರೆ, ನನ್ನನ್ನು ಒಂದು ಕಾಮಗಾರಿಯ ಉದ್ಘಾಟನೆಗೂ ಕರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ಸಂಡೂರಿನಲ್ಲಿ ರಾಮಬಾಣ ಬಿಡುವೆ. ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸುನಿಲ್‌ಕುಮಾರ್, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಎಂ.ಪಿ. ರೇಣುಕಾಚಾರ್ಯ, ಮಾಜಿ ಸಂಸದರಾದ ಭಗವಂತ ಖೂಬ, ಅಯ್ಯಾಳಿ ತಿಮ್ಮಪ್ಪ, ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್, ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಜಿ.ಸೋಮಶೇಖರ ರೆಡ್ಡಿ, ಡಿ. ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.