ಬಿಜೆಪಿ ಅಭ್ಯರ್ಥಿ ರಾಜೂಗೌಡ ನಾಮಪತ್ರ ಸಲ್ಲಿಕೆ

| Published : Apr 13 2024, 01:08 AM IST

ಸಾರಾಂಶ

ಸುರಪುರ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಚುನಾವಣಾಧಿಕಾರಿ ಕಾವ್ಯಾರಾಣಿಗೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ (ಯಾದಗಿರಿ)

ಶೋರಾಪುರ 36 (ಪರಿಶಿಷ್ಟ ಪಂಗಡ) ಚುನಾವಣಾ ಕ್ಷೇತ್ರದಿಂದ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಚುನಾವಣಾಧಿಕಾರಿ ಕಾವ್ಯಾರಾಣಿ ಕೆ. ವಿ. ಅವರಿಗೆ ನಾಮಪತ್ರ ಸಲ್ಲಿಸಿದರು.

ಶಾಸಕರಾಗಿದ್ದ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಈ ಸ್ಥಾನಕ್ಕೆ ಲೋಕಸಭೆಯ ಜೊತೆಗೆ ಚುನಾವಣೆ (ಮೇ 7) ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಏ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದ ಮೊದಲ ದಿನವೇ ಬಿಜೆಪಿಯಿಂದ ರಾಜೂಗೌಡ ನಾಮಪತ್ರ ಸಲ್ಲಿಸಿದ್ದಾರೆ. ಏ.18ರಂದು ಸಹ ಮತ್ತೊಮ್ಮೆ ಕಾರ್ಯಕರ್ತರೊಡಗೂಡಿ ನಾಮಪತ್ರ ಸಲ್ಲಿಸುವುದಾಗಿ ರಾಜೂಗೌಡ ತಿಳಿಸಿದ್ದಾರೆ. ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿಯಾಗಿದ್ದಾರೆ.

ನಮೂನೆ 3ಎ ನಲ್ಲಿ ಅಭ್ಯರ್ಥಿಯ ಹೆಸರು ನರಸಿಂಹ ನಾಯಕ, ತಂದೆ ಹೆಸರು ಶಂಭನಗೌಡ, ವಯಸ್ಸು 46, ವಿಳಾಸ ಸಾ. ಕೊಡೇಕಲ್, ಪೊ. ಕೊಡೇಕಲ್, ತಾಲೂಕು ಹುಣಸಗಿ, ಜಿಲ್ಲಾ ಯಾದಗಿರಿ ಪಿನ್ ಕೋಡ್ 582237, ಸದಸ್ಯತ್ವ ಪಕ್ಷ ಬಿಜೆಪಿ, ಜಾತಿ-(ಪರಿಶಿಷ್ಟ ಪಂಗಡ) ನಾಯಕ, ಅಭ್ಯರ್ಥಿಗಳ ಮತದಾರ ಪಟ್ಟಿಯ ಸಂಖ್ಯೆ 8, ಭಾಗ ಸಂಖ್ಯೆ 263, ಕ್ರಮ ಸಂಕ್ಯೆ 326, ಸೂಚಕರಾಗಿ ಯಲ್ಲಪ್ಪ ಕುರಕುಂದಿ ಸಹಿ ಮಾಡಿದ್ದಾರೆ. ಹಲವಾರು ಪುಟಗಳುಳ್ಳ ಮಾಹಿತಿಯನ್ನು ಚುನಾವಣಾಧಿಕಾರಿ ಅವರಿಗೆ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಉತ್ತಮ ದಿನವಾಗಿದ್ದು, ಶುಭ ದೊರೆಯಲಿದೆ ಎನ್ನುವ ಹಿನ್ನೆಲೆ ಶುಕ್ರವಾರ ಮೊದಲ ದಿನವೇ ನಾಮಪತ್ರ ಸಲ್ಲಿಸಿದ್ದೇನೆ. ಮತಕ್ಷೇತ್ರದಲ್ಲಿ ಜನರ ಬೆಂಬಲ ಮತ್ತು ಸಹಕಾರ ಉತ್ತಮವಾಗಿದೆ. ಹೋದ ಕಡೆ ನಿರೀಕ್ಷಿಸಿದಕ್ಕೂ ಹೆಚ್ಚು ಪ್ರೀತಿಯ ಸ್ವಾಗತ ದೊರೆಯುತ್ತಿದೆ. ಏ.18ರಂದು ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಚುನಾವಣಾಧಿಕಾರಿ ಕಾವ್ಯರಾಣಿ.ಕೆ.ವಿ., ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಭೀಮಣ್ಣ ಕುರಕುಂದಿ, ಭೀಮಶಂಕರ ಬಿಲ್ಲವ್ ಸೇರಿದಂತೆ ಇತರರಿದ್ದರು.