ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಳೇ ಬಾಗಲಕೋಟೆ ನಗರ ವ್ಯಾಪ್ತಿ ವಾರ್ಡ್ ನಂ.1 ಕಾಂಟ್ರ್ಯಾಕ್ಟರ್ ಬಡಾವಣೆಯಲ್ಲಿ ಪ್ರಾರ್ಥನಾ ಮಂದಿರ (ಮಸೀದಿ)ನಿರ್ಮಿಸುವ ಕುರಿತು ಪ್ರಸ್ತಾವನೆಗೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೇ ತೀವ್ರ ಜಟಾಪಟಿ ನಡೆಯಿತು.ಇಲ್ಲಿನ ನಗರಸಭೆ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಮಾತಿನ ಯುದ್ಧವೇ ನಡೆಸಿದರು.
ಮಸೀದಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ವಾರ್ಡ್ ನಂ.1 ಬಿಜೆಪಿ ಸದಸ್ಯೆ ಶೀವಲಿಲಾ ಪಟ್ಟಣಶೆಟ್ಟಿ ಮಾತನಾಡಿ, ಕಾಂಟ್ಯ್ರಾಕ್ಟರ್ ಕಾಲೋನಿಯಲ್ಲಿ ಮಸೀದಿ ನಿರ್ಮಾಣದಿಂದ ಸಮಸ್ಯೆ ಉಂಟಾಗಲಿದೆ. ಅಕ್ಕ-ಪಕ್ಕ ಶಾಲಾ, ಕಾಲೇಜು, ಆಸ್ಪತ್ರೆಗಳು ಇವೆ. ದಿನಕ್ಕೆ 5 ರಿಂದ 6 ಸಾರಿ ನಮಾಜ್ ಮಾಡುವುದರಿಂದ ಕಿರಿಕಿರಿ ಉಂಟಾಗಲಿದೆ. ಅಲ್ಲಿ ಒಂದೇ ಸಮಾಜದ ಜನ ಇಲ್ಲ. ಬೇರೆ ಬೇರೆ ಸಮಾಜದವರು ಇದ್ದಾರೆ. ಅವರೂ ಈಗಾಗಲೇ ಆಯುಕ್ತರಿಗೆ ಆಕ್ಷೇಪನೆ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಎಲ್ಲ ಸದಸ್ಯರ ವಿರೋಧವಿದೆ ಎಂದು ಸ್ಪಷ್ಟಪಸಿದರು.ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷ, ಸದಸ್ಯ ಬಸವರಾಜ ಅವರಾದಿ ಮಾತನಾಡಿ, 2021ರಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಛತ್ರಪತಿ ಶಿವಾಜಿ ಮಹಾರಾಜ ಪುತ್ಥಳಿ, ಅಣ್ಣ ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ಠರಾವು ಮಾಡಲಾಗಿತ್ತು. ಎಲ್ಲ ಇಲಾಖೆಗಳ ಪರವಾಣಿಗೆ ಕೂಡಾ ಸಿಕ್ಕಿತ್ತು. ಆದರು ಸಹ ಪುತ್ಥಳಿ ಸ್ಥಾಪನೆಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಲಿಲ್ಲ. ಇದೀಗ ಮಸೀದಿ ನಿರ್ಮಾಣಕ್ಕೆ ಹೇಗೆ ಅವಕಾಶ ನೀಡುತ್ತೀರಿ? ಇದು ಸರಿಯಾದ ನಿಲುವು, ನ್ಯಾಯವಲ್ಲ ಎಂದು ಪ್ರಶ್ನೆಗಳ ಸುರಿ ಮಳೆಗೈದರು.
ಇನ್ನೋರ್ವ ಸದಸ್ಯ ಶ್ರೀನಾಥ ಸಜ್ಜನ ಧ್ವನಿಗೂಡಿಸಿ ಮಸೀದಿಗೆ ಅನುಮತಿ ನೀಡಲು ತರಾತುರಿ ಮಾಡುವ ಇವರು ಶಿವಾಜಿ, ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಯಾಕೆ ಮಾಡುವುದಿಲ್ಲ. ಇದೀಗ ಇಲ್ಲದ ಕಾರಣ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೆ ಅನುಮತಿ ನೀಡಬಾರದು ಇದಕ್ಕೆ ಬಿಜೆಪಿ ಸದಸ್ಯರ ವಿರೋಧವಿದೆ ಎಂದು ತಿಳಿಸಿದರು.ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಸದಸ್ಯರಾದ ಹಾಜಿಸಾಬ ದಂಡಿನ, ಖಾಜಿಸಾಬ ಹೊನ್ಯಾಳ, ಚನ್ನವೀರ ಅಂಗಡಿ, ನಾವು ಶಿವಾಜಿ, ಬಸವೇಶ್ವರ ಪುತ್ಥಳಿ ಸ್ಥಾಪನೆಗೆ ವಿರೋಧ ಮಾಡಲಿಲ್ಲ. ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದೇವೆ. ಇದೀಗ ವಿರೋಧ ಮಾಡುವುದು ತರವಲ್ಲ. ಹಿಂದಿನ ಶಾಸಕರು ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲಿಲ್ಲ. ಪರಿಣಾಮ ಪುತ್ಥಳಿ ಸ್ಥಾಪನೆಗೆ ಹಿನ್ನಡೆಯಾಗಿದೆ. ಅದಕ್ಕೂ ಇದಕ್ಕೂ ಸಂಬಂಧ ಕಲ್ಪಿಸುವುದು ತರವಲ್ಲ. ಅಲ್ಲಿ ಅಲ್ಪಸಂಖ್ಯಾತರಿಗೆ ಪ್ರಾರ್ಥನೆ ಸಲ್ಲಿಸಲು ಯಾವುದೇ ಮಸೀದಿಗಳು ಇಲ್ಲ. ಅನ್ಯ ಸಮಾಜದವರು ಇಲ್ಲ. ಒಂದೇ ಸಮಾಜದವರು ಇದ್ದಾರೆ. ಇದಕ್ಕೆ ವಿರೋಧ ಮಾಡಬಾರದು. ಧರ್ಮ, ಜಾತಿ ಎಳೆತಂದು ಸಮಾಜದ ಸಾಮರಸ್ಯ ಹದಗೆಡಿಸಬಾರದು ಎಂದು ಹೇಳಿದರು.
ಇದೇ ವಿಷಯದ ಮೇಲೆ ನಗರಸಭೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೇ ತೀವ್ರ ಮಾತಿನ ಚಕಮಕಿ ನಡೆಯಿತು. ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ ದಿವ್ಯ ಮೌನ ವಹಿಸಿದ್ದರಿಂದ ಆಡಳಿತರೂಢ ಸದಸ್ಯರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತು. ಕೊನಗೆ ಆಯುಕ್ತ ಆರ್.ವಾಸಣ್ಣ ಮಾತನಾಡಿ, ನಗರಸಭೆ ಕೌನ್ಸಿಲ್ ಒಪ್ಪಿಗೆ ನೀಡಿದರೇ ಮಾತ್ರ ನಾವು ಪರವಾನಗಿ ನೀಡುತ್ತೇವೆ. ಆದರೇ ಇದಕ್ಕೆ ನಾವು ಸಲಹೆ, ಸೂಚನೆ ನೀಡಲು ಸಾಧ್ಯವಿಲ್ಲ. ಕೌನ್ಸಿಲ್ ನಿರ್ಣಯವೇ ಅಂತಿಮ ಎಂದು ಸ್ಪಷ್ಟಪಡಿಸಿ ಜಟಾಪಟಿಗೆ ತೆರೆ ಎಳೆದರು.ಸಭೆಯಲ್ಲಿ ಸಭಾಪತಿ ಯಲ್ಲಪ್ಪ ನಾರಾಯಣಿ, ಸದಸ್ಯರಾದ ವಿ.ವಿ.ಶಿರ ಗಣ್ಣವರ್, ನಾಗರತ್ನಾ ಹೆಬ್ಬಳ್ಳಿ, ಸ್ಮೀತಾ ಪವಾರ್, ಶಶಿಕಲಾ ಮಜ್ಜಗಿ, ಅಂಬಾಜಿ ಜೋಶಿ, ಲಕ್ಷ್ಮಣ ಮುಚಖಂಡಿ, ಚನ್ನ ಯ್ಯ ಹಿರೇಮಠ, ಭುವನೇಶ್ವರಿ ಕುಪ್ಪಸ್ತ, ಶಿವಬಸಪ್ಪ ಬಳ್ಳಾರಿ, ಶಾಂತಾ ಹನಮಕ್ಕನವರ್, ರತ್ನಾ ಕೆರೂರ, ಲಕ್ಷ್ಮೀ ಚವ್ದಾಣ್, ಸಾಗರ ಬಂಡಿ, ಸೀಮಾ ಕೌಸರ್ ನದಾಫ, ದ್ಯಾಮವ್ವ ಸೂಳಿಭಾವಿ, ರಮೇಶ ಕೋಟಿ ಇದ್ದರು.
ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿಗೆ ಆಕ್ರೋಶಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮುಳುಗಡೆ ಪ್ರದೇಶದಲ್ಲಿ ಅಂಗನವಾಡಿ ನಿರ್ಮಾಣ, ಸ್ವಚ್ಛತೆ, ಒಳಚರಂಡಿ ಅವ್ಯವಸ್ಥೆ, ನೀರು ಸರಬರಾಜಿನಲ್ಲಿ ವ್ಯತ್ಯಯ ಕುರಿತು ಪ್ರಶ್ನೆ ಮಾಡಿದ ಸರ್ವ ಸದಸ್ಯರು ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್‌ನಲ್ಲಿ ಜನರಿಗೆ ಉತ್ತರ ನೀಡಲು ಆಗುತ್ತಿಲ್ಲ. ಸುಖಾಸುಮ್ಮನೇ ಕೆಲಸ ಮಾಡುವುದು ಸರಿಯಿಲ್ಲ. 5-6 ತಿಂಗಳಿಂದ ಸ್ವಚ್ಛತೆ ಮಾಡಿಲ್ಲ. ಜನ ನಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.