ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಐಟಿ, ಸಿಬಿಐ ಹಾಗೂ ಇಡಿಗಳಂತಹ ಸಂಸ್ಥೆಗಳನ್ನು ಇಟ್ಟುಕೊಂಡು ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಟೀಕಿಸಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಮೂಲಕ ಬಡವರಿಗೆ ನೆರವಾಗುವಂತಹ ಕಾರ್ಯವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಸರ್ಕಾರ ಮಾಡುತ್ತಿದೆ. ಅಲ್ಲದೇ ಯಾವುದೇ ಕಮಿಷನ್ ಇಲ್ಲದೇ ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತವನ್ನು ಜನತೆಗೆ ನೀಡುತ್ತಿದ್ದೇವೆ. ಆದರೂ ಬಿಜೆಪಿ ಮತ್ತು ಜೆಡಿಎಸ್‌ನವರು ಜನತೆಯ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂದು ಇಲ್ಲಸಲ್ಲದ ಹೇಳಿಕೆಗಳನ್ನು ವಿರೋಧ ಪಕ್ಷದ ನಾಯಕರು ನೀಡುತ್ತಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದ್ದು, ಜನಪರ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಯಾವುದೇ ಊಹಾಪೋಹಗಳಿಗೆ ಆಸ್ಪದವಿಲ್ಲ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ಅವಧಿಯವರೆಗೆ ಆಡಳಿತ ನಡೆಸಲಿದೆ ಎಂದರು.ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ಇರುವಷ್ಟರಲ್ಲಿ ರಾಜ್ಯಾದ್ಯಂತ ವಿದ್ಯುತ್ ವಿತರಿಸಬೇಕಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವರು ಸಭೆ ನಡೆಸಿ ಚರ್ಚಿಸಿದ್ದು, ಹೊರರಾಜ್ಯದಿಂದ ವಿದ್ಯುತ್ ಖರೀದಿಸಿ, ಇನ್ನು 10 ದಿನಗಳ ಒಳಗಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಸುವ ಕಾರ್ಯ ಕೈಗೊಳ್ಳಲಿದ್ದಾರೆ ಎಂದರು.ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ಕ್ರಮ ವಹಿಸಲು ತಂಡ ರಚಿಸಿದ್ದು, ಸರ್ವೇ ನಡೆಸಲಾಗುತ್ತಿದೆ. ಹೆಣ್ಣುಭ್ರೂಣ ಹತ್ಯೆಗಳಾಗದಂತೆ ನಿಗಾವಹಿಸಲಾಗುವುದು ಎಂದರು. ಕಂಪ್ಲಿ ತಾಲೂಕಿನ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸಲಾಗುವುದು. ಈ ಭಾಗದ ಕುಸ್ತಿ ಹಾಗೂ ಕಬಡ್ಡಿ ಕ್ರೀಡಾಪಟುಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸ್ ರಾವ್, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಮುಖಂಡರಾದ ಪಿ. ಮೂಕಯ್ಯಸ್ವಾಮಿ, ಅಬ್ದುಲ್ ಮುನಾಫ್, ಅಬ್ದುಲ್ ವಾಹಿದ್, ವಾಲ್ಮೀಕಿ ಈರಣ್ಣ, ಹೊನ್ನಳ್ಳಿ ಜಗದೀಶ್, ಕೆ. ಚಂದ್ರಶೇಖರ್, ಎಚ್. ಶ್ರೀಕಾಂತ್, ಗಿರಿ ಸೇರಿದಂತೆ ಇತರರಿದ್ದರು.