ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ದಲಿತರ ಬಗ್ಗೆ ಗಂಟೆಗಂಟಲೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಮ್ಮ ಮಗನನ್ನು ಸಂಸದರನ್ನಾಗಿ ಮಾಡುವುದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಯಾವೊಬ್ಬ ದಲಿತರನ್ನು ರಾಜಕೀಯವಾಗಿ ಬೆಳೆಸಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಎಸ್.ಬಾಲರಾಜ್ ಹೇಳಿದರು.ಪಟ್ಟಮದ ಯಾತ್ರಿ ಭವನ್ ಕಲ್ಯಾಣ ಮಂಟಪದಲ್ಲಿ ಗುರುವಾರ ತಾಲೂಕು ಬಿಜೆಪಿ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದಲಿತರ ಮೀಸಲಾತಿಯನ್ನು ತೆಗೆಯುತ್ತಾರೆ ಎಂಬ ಹಸಿ ಸುಳ್ಳು ಹೇಳಿಕೊಂಡು ಅಪಪ್ರಚಾರ ಮಾಡಿದರು, ನೇರವಾಗಿ ಚುನಾವಣೆ ಎದುರಿಸದೆ ನಾನು ಶ್ರೀನಿವಾಸ ಪ್ರಸಾದ್ ಅವರನ್ನು ನಿಂದಿಸಿದ್ದೇನೆ, ಚುನಾವಣೆ ನಡೆಸಲು ಹಣವಿಲ್ಲದೆ ಸ್ಪರ್ಧೆಯಿಂದ ನಿರ್ಗಮಿಸಿದ್ದೇನೆ ಎಂಬ ಮಹದೇವಪ್ಪನವರ ಬಗ್ಗೆ ಮಾತನಾಡಲು ಹೇಸಿಗೆಯಾಗುತ್ತದೆ. ಬನ್ನಿ ಸೋಲಿಗೆ ಹೆದರಿ ಓಡಿ ಹೋಗುವುದಿಲ್ಲ, ಬನ್ನಿ ಎದುರುಬದುರಾಗಿ ತೊಡೆತಟ್ಟಿ ರಾಜಕೀಯ ಹೋರಾಟ ಮಾಡೋಣ, ಸುಳ್ಳು ಸುದ್ದಿ ಹಬ್ಬಿಸಿ, ಭ್ರಷ್ಟಾಚಾರ ಹಣದಲ್ಲಿ ಚುನಾವಣೆ ಗೆಲ್ಲುವ ನಿಮಗೆ ಜನ ಬುದ್ದಿ ಕಲಿಸುತ್ತಾರೆ. ಕಾಂಗ್ರೆಸ್ ನವರು ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಎಡತಾಕಿ, ಪ್ರಚಾರ ಪಡೆದುಕೊಂಡು ಚುನಾವಣೆ ಗೆದ್ದರು, 30 ವರ್ಷಗಳಿಂದ ದಲಿತರ ಮತ ಪಡೆದು ವಂಚಿಸುತ್ತಿರುವ ಎಚ್.ಸಿ. ಮಹದೇವಪ್ಪ ಸಂವಿಧಾನ ರಕ್ಷಕನಂತೆ ಪೋಜು ಕೊಡುತ್ತ ದಲಿತರನ್ನು ವಂಚಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.ಬಿಜೆಪಿ ಮುಖಂಡ ಬಿ. ಹರ್ಷವರ್ಧನ್ ಮಾತನಾಡಿ, ಕಾಂಗ್ರೆಸ್ ನವರು ವಿ. ಶ್ರೀನಿವಾಸ ಪ್ರಸಾದ್ ನಮಗೆ ಬೆಂಬಲ ನೀಡಿದ್ದಾರೆ ಎಂದು ಬಿಂಬಿಸಿಕೊಂಡು ಚುನಾವಣೆ ಗೆದ್ದರು, ಪಟ್ಟಣದಲ್ಲಿ ಅಂಬೇಡ್ಕರ್ ಭವನ, ಅಂಬೇಡ್ಕರ್ ಪುತ್ಥಳಿ ನಿರ್ಮಿಸಿದ ಶ್ರೀನಿವಾಸ ಪ್ರಸಾದ್ ಅವರನ್ನು ನಿನ್ನೆ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಭಾವಚಿತ್ರ ಬಳಸಲಿಲ್ಲ, ಜಿಲ್ಲೆಯಲ್ಲಿ ದಲಿತರ ಸ್ವಾಭಿಮಾನದ ಬದುಕಿಗೆ ಕಾರಣರಾದ ಅವರನ್ನು ಕಾರ್ಯಕ್ರಮದಲ್ಲಿ ನೆಪಕ್ಕಾದರೂ ನೆನೆಯಲಿಲ್ಲ. ಇಂದಿನ ಶಾಸಕರು ಒಂದೂವರೆ ವರ್ಷವಾದರೂ ಕ್ಷೇತ್ರಕ್ಕೆ ಒಂದು ರು. ಅನುದಾನ ತರಲು ಸಾಧ್ಯವಾಗಿಲ್ಲ. ನಾನು ತಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮತ್ತೆ ಭೂಮಿ ಪೂಜೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದಿನ ವಿಧಾನಸಭಾ ಚುನಾವಣೆಗೂ ಸಹ ನಂಜನಗೂಡು ಕ್ಷೇತ್ರ ಮೀಸಲು ಕ್ಷೇತ್ರವಾಗಿ ಉಳಿಯಲಿದೆ, ಆದ್ದರಿಂದ ಕ್ಷೇತ್ರದ ಶಾಸಕರ ವೈಫಲ್ಯಗಳನ್ನು ಜನರಿಗೆ ತಿಳಿಸಿ ಪಕ್ಷವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಇಂದಾಗಿ ದುಡಿದು ಪಕ್ಷವನ್ನು ಕ್ಷೇತ್ರದಲ್ಲಿ ಮತ್ತೆ ಅಧಿಕಾರಕ್ಕೆ ತರೋಣ ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಸಿದ್ದರಾಜು, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಸಿ. ಚಿಕ್ಕರಂಗನಾಯಕ, ಬಿಜೆಪಿ ಕಾರ್ಯದರ್ಶಿ ಪುಟ್ಟಸ್ವಾಮಿ, ಮುಖಂಡರಾದ ಸೋಮಣ್ಣ, ಸಿದ್ದರಾಜು, ಆರ್.ವಿ. ಮಹದೇವಸ್ವಾಮಿ, ಮಹೇಶ್, ನಾಗಮಣಿ, ಮೀನಾಕ್ಷಿ ನಾಗರಾಜ್, ಗೋವರ್ಧನ್, ಉಮೇಶ್, ಕಣೆನೂರು ಪರಶಿವಮೂರ್ತಿ, ಮಧುರಾಜು, ಬಿ.ಎಸ್. ರಾಮು, ಶಿವಣ್ಣ, ಸಿದ್ದರಾಜು ಇದ್ದರು.
------------