ರೈತರು ರಾಜ್ಯಾದ್ಯಂತ ಹೋರಾಟ ಮಾಡಿದ ಮೇಲೆ ಖರೀದಿ ಕೇಂದ್ರ ಆರಂಭಿಸಿದ್ದಾರೆ. ಅಲ್ಲದೆ ಗೋವಿನಜೋಳವನ್ನು ಖರೀದಿಸಲು ಪ್ರತಿ ರೈತರಿಗೆ 12- 20 ಕ್ವಿಂಟಲ್ ಮಿತಿ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಮುಖಂಡರು ತಿಳಿಸಿದರು.

ಲಕ್ಷ್ಮೇಶ್ವರ: ಗೋವಿನಜೋಳವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡುತ್ತಿರುವುದು ಸ್ವಾಗತಾರ್ಹ. ಗೋವಿನಜೋಳ ಖರೀದಿ ಮಿತಿಯನ್ನು ಕೇವಲ 20 ಕ್ವಿಂಟಲ್‌ಗೆ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಖರೀದಿ ಮಿತಿಯನ್ನು 100 ಕ್ವಿಂಟಲ್‌ಗೆ ಹೆಚ್ಚಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ರೈತರು ಈ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಮತ್ತು ಗೋವಿನಜೋಳ ಖರೀದಿ ಕೇಂದ್ರ ತೆರೆಯುವಲ್ಲಿ ಮೀನಮೇಷ ಮಾಡುತ್ತಿದೆ ಎಂದರು.

ರೈತರು ರಾಜ್ಯಾದ್ಯಂತ ಹೋರಾಟ ಮಾಡಿದ ಮೇಲೆ ಖರೀದಿ ಕೇಂದ್ರ ಆರಂಭಿಸಿದ್ದಾರೆ. ಅಲ್ಲದೆ ಗೋವಿನಜೋಳವನ್ನು ಖರೀದಿಸಲು ಪ್ರತಿ ರೈತರಿಗೆ 12- 20 ಕ್ವಿಂಟಲ್ ಮಿತಿ ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ. ಲಕ್ಷಾಂತರ ರೈತರು ನೂರಕ್ಕೂ ಹೆಚ್ಚು ಕ್ವಿಂಟಲ್ ಗೋವಿನಜೋಳ ಬೆಳೆದಿದ್ದಾರೆ. ಅದಕ್ಕಾಗಿ ರೈತರಿಂದ ಗರಿಷ್ಠ 100 ಕ್ವಿಂಟಲ್ ಜೋಳ ಖರೀದಿಸಬೇಕು. ಅಲ್ಲದೆ ಬ್ಯಾಂಕುಗಳು ಗೋವಿನಜೋಳದ ಬೆಂಬಲ ಬೆಲೆಯ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳದೆ ರೈತರಿಗೆ ನೀಡುವ ಮೂಲಕ ಅವರ ಕಷ್ಟಕ್ಕೆ ಆಗುವಂತೆ ಬ್ಯಾಂಕುಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾದ ಬಸವರಾಜ ಪಲ್ಲೇದ, ಟಿಎಪಿಎಂಎಸ್ ಅಧ್ಯಕ್ಷ ಸೋಮೇಶ ಉಪನಾಳ ಮಾತನಾಡಿದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಚನ್ನವೀರಪ್ಪ ಹೂಗಾರ, ತಾಲೂಕು ಮಂಡಲ ರೈತ ಮೋರ್ಚಾ ಪ್ರ. ಕಾರ್ಯದರ್ಶಿ ಅಶೋಕ ಸೂರಣಗಿ, ನಿಂಗಪ್ಪ ಬನ್ನಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ರಾಮು ನಾಯಕ, ಸಂತೋಷ ಜಾವೂರ, ಮಂಜುನಾಥ ಗಜಾಕೋಶ, ಬಸವರಾಜ ಕಲ್ಲೂರ ಜಾಹೀರ ಮೊಮೀನ ಇದ್ದರು.