ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಮರುಸೇರ್ಪಡೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಮರುಸೇರ್ಪಡೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿಯು ರಾಜ್ಯಪಾಲರಿಗೆ ದೂರು ನೀಡಿದೆ.ಸೋಮವಾರ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ಅನಿರ್ದಿಷ್ಟಾವಧಿ ಮುಂದೂಡಿದ ಬಳಿಕ ಕಾಲ್ನಡಿಗೆಯಲ್ಲಿ ಲೋಕಭವನಕ್ಕೆ ತೆರಳಿದ ಬಿಜೆಪಿ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ ಮತ್ತಿತರರು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿದರು.ಇದು ಕೇವಲ ಕಾನೂನುಬದ್ಧ ಅರ್ಹತೆಯ ಪ್ರಶ್ನೆಯಲ್ಲ; ಸಂವಿಧಾನಾತ್ಮಕ ಔಚಿತ್ಯ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಜನರ ವಿಶ್ವಾಸದ ಪ್ರಶ್ನೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಸಚಿವ ಸಂಪುಟ ಸೇರ್ಪಡೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ರಾಜ್ಯಪಾಲರು ಈ ವಿಚಾರದಲ್ಲಿ ತಮ್ಮ ಸಂವಿಧಾನಾತ್ಮಕ ವ್ಯಾಪ್ತಿಯೊಳಗೆ ಅಗತ್ಯ ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಕರಣದಲ್ಲಿ ಸುಮಾರು ₹89.63 ಕೋಟಿ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ನಡೆದಿರುವ ಬಗ್ಗೆ ತನಿಖಾ ಸಂಸ್ಥೆ ಆರೋಪಗಳನ್ನು ದಾಖಲಿಸಿದೆ. ಈ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರನ್ನು ಆರೋಪಿಯಾಗಿ ಹೆಸರಿಸಲಾಗಿದ್ದು, ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸೇರಿದಂತೆ ಇತರ ಸಂಸ್ಥೆಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳೂ ಮುಂದುವರಿದಿವೆ ತಿಳಿಸಲಾಗಿದೆನಾಗೇಂದ್ರ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಂದಿನ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡುವಷ್ಟು ಗಂಭೀರವಾಗಿದ್ದ ಆರೋಪಗಳು ಇಂದು ಏನು ಬದಲಾಗಿವೆ?ಆರೋಪಗಳು ಕೊನೆಗೊಂಡಿಲ್ಲ. ಪ್ರಕರಣ ಮುಚ್ಚಲ್ಪಟ್ಟಿಲ್ಲ. ಯಾವುದೇ ಖುಲಾಸೆ ಆಗಿಲ್ಲ. ಬದಲಾಗಿ ತನಿಖೆ ಮುಂದುವರಿದು ಚಾರ್ಜ್‌ಶೀಟ್ ಸಲ್ಲಿಕೆಯ ಹಂತಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಅದೇ ವ್ಯಕ್ತಿಯನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದಕ್ಕೆ ಸರ್ಕಾರದ ಬಳಿ ಯಾವ ನೈತಿಕ ಸಮರ್ಥನೆ ಇದೆ?
ಸಚಿವರ ನೇಮಕಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಮಾನದಂಡಗಳನ್ನು ಚರ್ಚಿಸಿರುವ ಸುಪ್ರೀಂ ಕೋರ್ಟ್‌ನ ‘ಮನೋಜ್ ನರುಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ (2014) ತೀರ್ಪನ್ನು ರಾಜ್ಯಪಾಲರ ಗಮನಕ್ಕೆ ತರಲಾಗಿದೆ.ಕ್ರಿಮಿನಲ್ ಪ್ರಕರಣ ಬಾಕಿಯಿದೆ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬರು ಕಾನೂನುಬದ್ಧವಾಗಿ ಸಚಿವರಾಗಲು ಅನರ್ಹರಾಗುವುದಿಲ್ಲ ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಗುರುತಿಸಿದ್ದರೂ, ಸಂವಿಧಾನಾತ್ಮಕ ನೈತಿಕತೆ, ಉತ್ತಮ ಆಡಳಿತ, ಸಾರ್ವಜನಿಕ ಜೀವನದಲ್ಲಿನ ಪ್ರಾಮಾಣಿಕತೆ ಮತ್ತು ಜನರ ವಿಶ್ವಾಸವನ್ನು ಕಾಪಾಡುವ ಜವಾಬ್ದಾರಿ ಮುಖ್ಯಮಂತ್ರಿಗೆ ಇದೆ ಎಂಬುದನ್ನು ತೀರ್ಪು ಒತ್ತಿಹೇಳುತ್ತದೆ ಎಂದು ಪ್ರಸ್ತಾಪಿಸಲಾಗಿದೆ.ಕಾನೂನುಬದ್ಧ ಅರ್ಹತೆ ಬೇರೆ; ಸಂವಿಧಾನಾತ್ಮಕ ಔಚಿತ್ಯ ಮತ್ತು ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ನೈತಿಕ ಜವಾಬ್ದಾರಿ ಬೇರೆ. ಅಪರಾಧ ಪ್ರಕರಣದಲ್ಲಿ ಅಂತಿಮ ತೀರ್ಪು ನೀಡುವುದು ನ್ಯಾಯಾಲಯದ ಕೆಲಸ. ಆದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದು ಮುಖ್ಯಮಂತ್ರಿಯ ಸಂವಿಧಾನಾತ್ಮಕ ಮತ್ತು ನೈತಿಕ ಜವಾಬ್ದಾರಿಯ ಪ್ರಶ್ನೆ ಎಂದು ಬಿಜೆಪಿ ನಾಯಕರು ಮನವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಬಿ. ನಾಗೇಂದ್ರ ವಿರುದ್ಧದ ಸಿಬಿಐ, ಲೋಕಾಯುಕ್ತ ಹಾಗೂ ಇತರ ಪ್ರಕರಣಗಳ ಪ್ರಸ್ತುತ ಸ್ಥಿತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಿಂದ ಸಮಗ್ರ ವರದಿ ಪಡೆಯಬೇಕು, ಹಿಂದಿನ ಸಚಿವ ಸಂಪುಟದಿಂದ ನಾಗೇಂದ್ರ ಅವರು ರಾಜೀನಾಮೆ ನೀಡಿದ ಸಂದರ್ಭದಿಂದ ಇಂದಿನವರೆಗೆ ಯಾವ ಮಹತ್ವದ ಪರಿಸ್ಥಿತಿಗಳು ಬದಲಾಗಿವೆ ಎಂಬುದರ ಕುರಿತು ಮುಖ್ಯಮಂತ್ರಿಯಿಂದ ವಿವರಣೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.