ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪು
ಹೇಮಾವತಿ ನದಿ ದಂಡೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷರೊಬ್ಬರು ಅನಧಿಕೃತವಾಗಿ ನಿರ್ಮಿಸಿದ್ದ ತಡೆಗೋಡೆಯನ್ನು ತಾಲೂಕು ಆಡಳಿತ ಶನಿವಾರ ಬೆಳ್ಳಂಬೆಳಿಗ್ಗೆ ತೆರವುಗೊಳಿಸಿದೆ.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರೊಬ್ಬರು ಹಿನ್ನೀರು ನಿಲುಗಡೆ ಪ್ರದೇಶದಲ್ಲಿ ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದು, ೨೦೧೯ರಲ್ಲಿ ಮಳೆಗಾಲದಲ್ಲಿ ಹೇಮಾವತಿ ಪ್ರವಾಹ ಕಲ್ಯಾಣ ಮಂಟಪವನ್ನು ಆವರಿಸಿದ್ದರಿಂದ ದೊಡ್ಡ ಸಮಸ್ಯೆ ಸೃಷ್ಟಿಯಾಗಿತ್ತು. ಇದರಿಂದ ಕಲ್ಯಾಣ ಮಂಪಟದ ಸನಿಹ ಹಿನ್ನೀರು ನಿಲುಗಡೆಯಾಗುವ ಭತ್ತದ ಗದ್ದೆಗಳಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತಾದರೂ ನದಿ ನೀರು ಕಲ್ಯಾಣ ಮಂಟಪಕ್ಕೆ ನುಗ್ಗುವುದನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಕಳೆದೊಂದು ವರ್ಷದಿಂದ ನದಿಗೆ ಹೊಂದಿಕೊಂಡಂತೆ ದೊಡ್ಡ ತಡೆಗೋಡೆ ನಿರ್ಮಿಸಲಾಗುತಿತ್ತು. ತಡೆಗೋಡೆ ನಿರ್ಮಾಣವಾದರೆ ನದಿ ನೀರು ಹಿಮ್ಮುಖವಾಗಿ ಚಲಿಸಿ ಪಟ್ಟಣಕ್ಕೆ ನುಗ್ಗಲಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿ ಬಂದಿತ್ತು. ಇದರಿಂದ ಹಲವು ಬಾರಿ ತಡೆಗೋಡೆ ನಿರ್ಮಾಣಕ್ಕೆ ತಾಲೂಕು ಆಡಳಿತ ತಡೆ ಒಡ್ಡಿತ್ತಾದರೂ ರಜೆ ದಿನಗಳಲ್ಲಿ ಕಾಮಗಾರಿ ಎಗ್ಗಿಲ್ಲದೆ ಸಾಗಿದ್ದರಿಂದ ಬಹುತೇಕ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿತ್ತು.
ಈ ಬಗ್ಗೆ ವ್ಯಾಪಕ ವಿರೋಧಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ನಿರ್ದೇಶನದಂತೆ ಶನಿವಾರ ತಹಸೀಲ್ದಾರ್ ಮೇಘನಾ ನೇತೃತ್ವದಲ್ಲಿ ತಾಲೂಕು ಆಡಳಿತ ಸರ್ವಸಿದ್ಧತೆಯೊಂದಿಗೆ ಮುಂಜಾನೆ ಕಾರ್ಯಾಚರಣೆ ನಡೆಸಿ ತಡೆಗೋಡೆ ತೆರವುಗೊಳಿಸಿತು. ಈ ವೇಳೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.