ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿರುವ ಶಾಸಕ ಆರಗ ಜ್ಞಾನೇಂದ್ರರ ಆರೋಪ ರಾಜಕೀಯ ಪ್ರೇರಣೆಯಿಂದ ಕೂಡಿದ್ದು ತಾಲೂಕಿನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಲ್ಲಿ ಮಾಸಿಕ 10 ಕೋಟಿ ರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ 2 ಕೋಟಿ ರು. ಗಿಂತಲೂ ಹೆಚ್ಚು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ ಹೇಳಿದರು.ಸೋಮವಾರ ನಗರದ ಗಾಂಧಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಡವರಿಗೆ ಲಭಿಸುವ ಗ್ಯಾರೆಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ, ಅಭಿವೃದ್ಧಿ ವಿರೋದಿ ಎಂದು ಗಲಭೆ ಎಬ್ಬಿಸುವ ಬಿಜೆಪಿ, ಮಹಾರಾಷ್ಟ್ರ ಸೇರಿ ಉತ್ತರದ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕರ್ನಾಟಕದ ಮಾದರಿಯಲ್ಲೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರರ ಆರೋಪ ರಾಜಕೀಯ ಪ್ರೇರಣೆಯಿಂದ ಕೂಡಿದ್ದು, ಬಡವರ ವಿರೋಧಿ ಆಗಿದೆ. ಈ ಯೋಜನೆಯನ್ನು ವಿರೋಧಿಸುವವರು ಯೋಜನೆಯ ಸೌಲಭ್ಯ ಪಡೆಯದಿರುವುದು ಉತ್ತಮ ಎಂದು ತಿಳಿಸಿದರು.ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತ ಅವದಿಯಲ್ಲಿ ಕ್ಷೇತ್ರಕ್ಕೆ 4 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಂಡಿರುವ ಶಾಸಕರು ಕುಸಿದ ಸೇತುವೆ, ತೇಲಿ ಹೋದ ರಸ್ತೆಗಳು ಮತ್ತು ಸೋರಿಕೆಯ ಕಟ್ಟಡಗಳ ಬಗ್ಗೆ ಚಕಾರ ಎತ್ತುತ್ತಿಲ್ಲಾ. ಈ ಎಲ್ಲಾ ವೈಫಲ್ಯಗಳ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸುವುದಲ್ಲದೇ ಈ ಎಲ್ಲಾ ವಿಚಾರಗಳ ಕುರಿತಂತೆ ಮುಖಾಮುಖಿ ಬಹಿರಂಗ ಚರ್ಚೆಗೆ ಬರುವುದಾದರೆ ನಮ್ಮ ನಾಯಕರಾದ ಕಿಮ್ಮನೆ ರತ್ನಾಕರ್ ಅವರನ್ನು ಕರೆ ತರುತ್ತೇವೆ ಎಂದು ಹೇಳಿದರು.
ಹೆಂಡದ ಅಂಗಡಿ ಪರವಾನಗಿ ಸಲುವಾಗಿ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸಿದ ಶಾಸಕರು ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಇದೇ ಪ್ರಕರಣಕ್ಕೆ ಸಂಭಂದಿಸಿ ಅರೆಹಳ್ಳಿ ಗ್ರಾಪಂಯಲ್ಲಿ 5 ಸಾವಿರ ರು. ವೆಚ್ಚದಲ್ಲಿ ರಸ್ತೆ ರಿಪೇರಿ ಮಾಡಿಸಲಾಗಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಕಾರ್ಯಕರ್ತರು ಹಣ ಗಳಿಸುವ ತಂತ್ರವನ್ನು ನಮಗೂ ತಿಳಿಸಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ ಗೇಲಿ ಮಾಡಿದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಪೂರ್ಣೇಶ್ ಕೆಳಕೆರೆ, ಅಶ್ವಲ್, ತಾಲೂಕು ಎನ್‍ಎಸ್‍ಯುಐ ಅಧ್ಯಕ್ಷ ಸುಜಿತ್, ಶ್ರೇಯಸ್ ಇದ್ದರು.