ಸಾರಾಂಶ
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಬಿಜೆಪಿ ಕಳೆದುಕೊಂಡಿದೆ. ಗೆಲುವಿನ ಅಂತರ ಕಡಿಮೆಯಾದರೂ ಕೊನೆಗೆ ಗೆಲ್ಲುವುದು ಮಾತ್ರ ಕಾಂಗ್ರೆಸ್ ಪಕ್ಷವೇ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಕನ್ನಡಪ್ರಭ ಚನ್ನಮ್ಮನ ಕಿತ್ತೂರು
ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಬಿಜೆಪಿ ಕಳೆದುಕೊಂಡಿದೆ. ಗೆಲುವಿನ ಅಂತರ ಕಡಿಮೆಯಾದರೂ ಕೊನೆಗೆ ಗೆಲ್ಲುವುದು ಮಾತ್ರ ಕಾಂಗ್ರೆಸ್ ಪಕ್ಷವೇ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಪರಿಣಾಮ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಸಾಮಾನ್ಯ ಜನರ ನಾಡಿ ಮಿಡಿತ ಅರಿತವರಿದ್ದಾರೆ. ಈ ಹಿಂದೆ ಶಾಸಕರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ತಿಳಿಸಿದರು.ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ತಕ್ಷಣದಲ್ಲಿ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಕುರಿತು ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಹಾಗೂ ಖಾನಾಪುರ ಕ್ಷೇತ್ರಗಳಿಗೆ ಮಾರ್ಗರೇಟ್ ಆಳ್ವಾ ಅವರು ಸಂಸದರಿದ್ದ ವೇಳೆ ಮಾತ್ರ ಅನುದಾನ ದೊರೆತಿತ್ತು. ಅಂದಿನಿಂದ ಇಲ್ಲಿಯವರೆಗೂ ಯಾವುದೇ ಅನುದಾನ ಕ್ಷೇತ್ರ ಕಂಡಿಲ್ಲ. ಈ ಬಾರಿ ಜನರ ಬೆಂಬಲ ಕಾಂಗ್ರೆಸ್ ಪಕ್ಷಕ್ಕಿದ್ದು, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಶಂಕರ ಹೊಳಿ, ಆಶ್ಪಾಕ ಹವಾಲ್ದಾರ ಸೇರಿದಂತೆ ಪಪಂ ಕಾಂಗ್ರೆಸ್ ಸದಸ್ಯರು ಹಾಜರಿದ್ದರು.