ಸಾರಾಂಶ
ಕೊಪ್ಪಳ:
ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸೇನೆಯನ್ನು ಗೌರವಿಸಲು ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ತಿರಂಗ ಯಾತ್ರೆಯಲ್ಲಿ ಅನೇಕ ಸಂಘಟನೆಗಳು, ಮಾಜಿ ಸೈನಿಕರು, ವೈದ್ಯರು, ವಕೀಲರು ಸೇರಿದಂತೆ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ನಗರದ ಗಡಿಯಾರ ಕಂಬದ ಬಳಿ ತಿರಂಗಾ ಯಾತ್ರೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳಿಕ್ಯಾತರ ಚಾಲನೆ ನೀಡಿದರು. ಬಳಿಕ ಯಾತ್ರೆಯಲ್ಲಿ ಸೈನಿಕರ ಪರ ಮತ್ತು ದೇಶದ ಕುರಿತು ಘೋಷಣೆ ಕೂಗುತ್ತಾ ಸಾಗಲಾಯಿತು. ದಾರಿಯುದ್ದಕ್ಕೂ ಪಾಕಿಸ್ತಾನದ ವಿರೋಧಿ ಘೋಷಣೆಗಳು ಮೊಳಗಿದವು. ಮಾರುಕಟ್ಟೆಯುದ್ದಕ್ಕೂ ಸಾಗಿದ ತಿರಂಗಾ ಯಾತ್ರೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಬೆಂಬಲ ಸೂಚಿಸಿದರು. ರಸ್ತೆ ಅಕ್ಕಪಕ್ಕದ ಅಂಗಡಿಯವರು ಬಂದು ಭಾಗವಹಿಸಿದ್ದರು. ಜವಾಹರಲಾಲ್ ನೆಹರು ರಸ್ತೆಯುದ್ದಕ್ಕೂ ಸಾಗಿದ ತಿರಂಗಾ ಯಾತ್ರೆ ಅಶೋಕ ಸರ್ಕಲ್‌ನಲ್ಲಿ ಜಮಾವಣೆಗೊಂಡು ವಿಜಯೋತ್ಸವ ಆಚರಿಸಿತು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು, ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನುವಳ್ಳಿ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ, ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ ಮಾತನಾಡಿ, ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.ಪಾಪಿ ಪಾಕಿಸ್ತಾನ ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ. ಅಮಾಯಕ ಪ್ರವಾಸಿಗರನ್ನು ಉಗ್ರಗಾಮಿಗಳ ಮೂಲಕ ಕೊಲ್ಲಿಸಿ ಭಾರತೀಯ ಮಹಿಳೆಯರ ಸಿಂದೂರ ಅಳಿಸಿತು. ಇದಕ್ಕಾಗಿಯೇ ಕೇಂದ್ರ ಸರ್ಕಾರ ಆಪರೇಷನ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆ. ಇನ್ನೆಂದು ಪಾಕಿಸ್ತಾನ ಭಾರತದ ಮೇಲೆ ಇಂಥ ಹೀನಕೃತ್ಯ ಮಾಡದಂತೆ ಶಾಸ್ತಿ ಮಾಡಲಾಗಿದೆ ಎಂದು ಕಿಡಿಕಾರಿದರು. ನಮ್ಮ ಸೈನಿಕರು ಹಗಲಿರುಳು ಹೋರಾಟ ಮಾಡಿ ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಅವಕಾಶ ಕೊಟ್ಟಿದ್ದರೇ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಮಾಡುತ್ತಿದ್ದರು ಎಂದು ಹೇಳಿದರು.
ಮಾಜಿ ಸೈನಿಕರು ಮಾತನಾಡಿ, ಭಾರತದ ಶಕ್ತಿ ಪ್ರದರ್ಶನ ಆಗಿಲ್ಲ. ಕೇವಲ ಸಾಂಕೇತಿಕವಾಗಿ ಮಾತ್ರ ಆಪರೇಷನ್ ಸಿಂದೂರ ಮಾಡಲಾಗಿದೆ. ಹಾಗೊಂದು ವೇಳೆ ಅವಕಾಶ ನೀಡಿದರೇ ಪಾಕಿಸ್ತಾನಕ್ಕೆ ಇನ್ನೆಂದು ಭಾರತದತ್ತ ಬರದಂತೆ ಸೈನಿಕರು ಮಾಡುತ್ತಾರೆ. ಅಷ್ಟಕ್ಕೂ ಪಾಕಿಸ್ತಾನವನ್ನು ಹೊಡೆದು ಹಾಕಲು ಸೈನಿಕರೇ ಬೇಕಾಗಿಲ್ಲ, ಮಾಜಿ ಸೈನಿಕರೇ ಸಾಕು ಎಂದು ಹೇಳಿದರು.ಈ ವೇಳೆ ಎಚ್. ಗಿರಿಗೌಡ, ತಿಪ್ಪೇರುದ್ರಸ್ವಾಮಿ, ಬಿಜಿಪಿ ಮಾಜಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಚಂದ್ರಶೇಖರ ಕವಲೂರು, ಕೆ.ಜಿ. ಕುಲಕರ್ಣಿ, ಮಹಾಂತೇಶ ಪಾಟೀಲ್ ಮೊದಲಾದವರು ಇದ್ದರು.