ಬಿಜೆಪಿಯಲ್ಲಿಯೇ ಅಲ್ಲೋಲ ಕಲ್ಲೋಲ: ಶಿವರಾಜ ತಂಗಡಗಿ

| Published : Oct 06 2025, 01:01 AM IST

ಬಿಜೆಪಿಯಲ್ಲಿಯೇ ಅಲ್ಲೋಲ ಕಲ್ಲೋಲ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಕ್ಷೆ ಅತ್ಯಂತ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆ ಮೀರಿ ಸಾಧನೆಯಾಗುತ್ತಿದೆ

ಕೊಪ್ಪಳ: ಬಿಹಾರ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಅಲ್ಲೋಲ ಕಲ್ಲೋಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿರುವುದಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಅಥವಾ ರಾಜ್ಯ ಸರ್ಕಾರದಲ್ಲಿ ಅಲ್ಲ, ಬಿಜೆಪಿಯಲ್ಲಿಯೇ ಈಗಾಗಲೇ ಅಲ್ಲೋಲ ಕಲ್ಲೋಲವಾಗಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಅಲ್ಲೋಲ ಕಲ್ಲೋಲವೂ ಇಲ್ಲ. ನವೆಂಬರ್‌ ಕ್ರಾಂತಿಯೂ ಇಲ್ಲ. ಅದೆಲ್ಲವೂ ಬಿಜೆಪಿಯಲ್ಲಿ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮೊದಲು ತಮ್ಮ ಪಕ್ಷದಲ್ಲಿ ಆಗುತ್ತಿರುವುದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಸಮೀಕ್ಷೆ ಅತ್ಯಂತ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆ ಮೀರಿ ಸಾಧನೆಯಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಶೇ. 96ರಷ್ಟು ಪೂರ್ಣಗೊಂಡಿದ್ದು, ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂರರಷ್ಟಾಗಿದೆ ಎಂದರು.

ಸಮೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ಸೆ. 6ರಂದು ನೂರಕ್ಕೆ ನೂರು ಆಗಲಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ ಆಗಮಿಸುವ ವೇಳೆ ಅವರ ಗಮನಕ್ಕೆ ತರುವುದಾಗಿ ಹೇಳಿದರು.

ಸಮೀಕ್ಷೆಯ ಪ್ರಶ್ನೆಗಳ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ ವಿರೋಧ ಮಾಡಿಲ್ಲ, ಪ್ರಶ್ನೆಗಳ ಸಂಖ್ಯೆ ಜಾಸ್ತಿಯಾಗಿವೆ ಎಂದು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಜನರಲ್ಲಿ ನಾವು ಹೇಳುವುದು ಇಷ್ಟೇ, ಇದ್ಯಾವುದು ಕಡ್ಡಾಯವಲ್ಲ, ನೀವು ಎಷ್ಟು ಮಾಹಿತಿ ನೀಡಬೇಕಾಗುತ್ತದೆ ಅಷ್ಟನ್ನು ನೀಡಿ ಎಂದು ಹೇಳಿದ್ದೇವೆ ಎಂದರು.

ಸಮೀಕ್ಷೆಯನ್ನು ಯಾರು ವಿರೋಧ ಮಾಡಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತ್ರ ಮಾಹಿತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುವಾಗ ಅವರು ಮಾಹಿತಿ ನೀಡುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಸಮೀಕ್ಷೆ ಮಾಡುವ ಉದ್ದೇಶ ಇಷ್ಟೇ, ಯಾವ ಸಮುದಾಯಕ್ಕೆ ಎಷ್ಟು ಬಡವರಿದ್ದಾರೆ ಎನ್ನುವ ಮಾಹಿತಿ ಸಂಗ್ರಹ ಮಾಡಿ ಅವರಿಗೆ ಸರ್ಕಾರದಿಂದ ನೆರವು ನೀಡಲು, ಯೋಜನೆ ರೂಪಿಸಲು ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಎಂದರು.

ಎಸ್‌ಸಿ-ಎಸ್‌ಟಿ ಜನಸಂಖ್ಯೆಯ ಆಧಾರದ ಮೇಲೆ ಬಜೆಟ್‌ನಲ್ಲಿ ಅನುದಾನ ಮೀಸಲು ಇಟ್ಟಿರುವಂತೆ ಎಲ್ಲ ವರ್ಗಗಳಲ್ಲಿಯೂ ಬಡವರು ಇದ್ದಾರೆ. ಅವರನ್ನು ಗುರುತಿಸಿ, ಮುನ್ನೆಲೆಗೆ ತರಬೇಕಾಗಿದೆ ಎಂದರು.

ಕೇವಲ ಎಸ್‌ಸಿ-ಎಸ್‌ಟಿ ಅಷ್ಟೇ ಅಲ್ಲ, ಬ್ರಾಹ್ಮಣರು, ಲಿಂಗಾಯತರು ಸೇರದಂತೆ ಎಲ್ಲ ವರ್ಗಗಳಲ್ಲಿ ಬಡವರಿದ್ದಾರೆ. ಅವರ ಅನುಕೂಲಕ್ಕಾಗಿ ಮಾಡಲಾಗುತ್ತದೆ. ಅವರ ಮಾಹಿತಿ ಸಂಗ್ರಹಿಸಲಾಗುತ್ತದೆ. ಈಗಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಸಮೀಕ್ಷೆ ಸಹಕಾರಿಯಾಗಬಹುದು ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಇದ್ದರು.