ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸಲು ಪಕ್ಷದ ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರು ತಮ್ಮ ಬೂತ್‌ನಲ್ಲಿ ಬಹುಮತ ಪಡೆದುಕೊಂಡು ಜಯ ಸಾಧಿಸಿದರೆ ಮತ್ತೇ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಎನ್.ವಿ. ಫಣೀಶ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಚಾ.ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳ ಚುನಾವಣಾ ನಿರ್ವಹಣೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶ ಅಲ್ಲ ವಿಶ್ವದಲ್ಲೇ ಮೋದಿಪರ ಅಲೆ ಇದೆ. ವಿದೇಶಗಳಲ್ಲಿಯೂ ಸಹ ನರೇಂದ್ರ ಮೋದಿ ಅವರು ಮತ್ತೇ ಬಹುಮತಗಳಿಸಿ ಪ್ರಧಾನಿಯಾಗಲಿದ್ದಾರೆ ಎಂಬ ಅಚಲವಾದ ವಿಶ್ವಾಸವನ್ನು ಹೊಂದಿದ್ದಾರೆ. ದೇಶದಲ್ಲಿ ಬಿಜೆಪಿ ಅಲೆಯನ್ನೇ ನಂಬಿಕೊಂಡು ಕೂರಬಾರದು. ನಮ್ಮ ಬೂತ್‌ನಲ್ಲಿ ಬಿಜೆಪಿ ಹಾಗೂ ಮೋದಿಗೆ ಹೆಚ್ಚು ಮತಗಳು ಬರುವಂತೆ ಮಾಡುವ ದಿಕ್ಕಿನಲ್ಲಿ ಎಲ್ಲರು ಕಾರ್ಯೋನ್ಮುಖರಾಗಬೇಕು ಎಂದರು.ಇಷ್ಟರಲ್ಲೇ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಮೊದಲ ಹಂತದ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯದ ೨೮ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ೨ ಹಂತದ ಪಟ್ಟಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಯಾರೇ ಅಭ್ಯರ್ಥಿಯಾದರು ಸಹ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿ ಹಾಗೂ ಕಮಲ ಗುರುತಿಗೆ ಮತ ಹಾಕಿಸುವ ಕೆಲಸವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ಲೋಕಸಭಾ ಕ್ಷೇತ್ರದ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಚಾ.ನಗರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಖಂಡಿತ ಗೆಲುವು ಸಾಧಿಸಿದ್ದಾರೆ. ಅದು ನಿಮ್ಮೆಲ್ಲರ ಶ್ರಮ ಮತ್ತು ಬೂತ್ ಮಟ್ಟದಲ್ಲಿರುವ ಕಾರ್ಯಕರ್ತರ ಪರಿಶ್ರಮದಿಂದಾಗಿ ಎಂಬುದನ್ನು ಯಾರು ಮರೆಯಬಾರದು. ನಾನು ಎಂಬುದನ್ನು ಬಿಟ್ಟು ನಾವು ಎಂದು ಒಗ್ಗಟ್ಟಿನ ಮಂತ್ರವನ್ನು ಜಪಿಸಿಕೊಂಡು ಮುನ್ನಡೆಯೋಣ, ೧೦ ವರ್ಷಗಳ ಬಿಜೆಪಿ ಸಾಧನೆ, ಮೋದಿ ಪ್ರತಿಯೊಬ್ಬರಿಗೆ ನೀಡಿರುವ ಯೋಜನೆಯನ್ನು ಪ್ರಚುರಪಡಿಸಿ, ಮತ ತಾನಾಗಿಯೇ ಬಿಜೆಪಿ ಪರವಾಗಿ ಬರುತ್ತದೆ. ಸಕ್ರಿಯವಾಗಿ ಒಂದು ತಿಂಗಳು ಎಲ್ಲಿಯೂ ಮೈಮರೆಯದೇ ಓಡಾಡಬೇಕು ಎಂದರು.ಕ್ಲಸ್ಟರ್ ಪ್ರಮುಖ್ ಎ. ರಾಮದಾಸ್ ಮಾತನಾಡಿ, ಬಿಜೆಪಿ ಹತ್ತು ವರ್ಷಗಳ ಭ್ರಷ್ಟಚಾರಮುಕ್ತ ಆಡಳಿತ ಹಾಗೂ ಜನಪರ ಯೋಜನೆಗಳು, ದೇಶದ ಭದ್ರತೆ ಮತ್ತು ಭವಿಷ್ಯಕ್ಕಾಗಿ ನೀಡಿದ ಕಾರ್ಯಕ್ರಮಗಳು ನಮ್ಮ ಕಣ್ಮುಂದೆ ಇವೆ. ಇವೆಲ್ಲವನ್ನು ಪ್ರತಿ ಮತದಾರರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಪ್ರತಿ ಸಭೆಗಳಿಗೆ ಆಗಮಿಸಿ, ಸಲಹೆ ಸೂಚನೆ, ಮಾರ್ಗದರ್ಶನ ಪಡೆದುಕೊಂಡು ತಮ್ಮ ಬೂತ್‌ನಲ್ಲಿ ಚಾಲನೆ ಮಾಡಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಹೀಗಾಗಿ ನಾವು ವಿಧಾನಸಭಾ ಚುನಾವಣೆಯಲ್ಲಿ ನಾನಾ ಕಾರಣಗಳಿಂದ ಗೆಲುವು ಸಾಧಿಸಲು ಆಗಿಲ್ಲ. ಆದರೆ, ಲೋಕಸಭಾ ಚುನಾವಣೆಯು ರಾಷ್ಟ್ರೀಯ ವಿಚಾರ ಹಾಗೂ ದೇಶದ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಪ್ರಬುದ್ದ ಮತದಾರ ಬಿಜೆಪಿಗೆ ಮತ ನೀಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾನೆ. ಹೀಗಾಗಿ ಪಕ್ಷದ ಸಕ್ರಿಯ ಕಾರ್ಯಕರ್ತರು ಬಿಜೆಪಿ ಸಾಧನೆಯುಳ್ಳ ಕಿರು ಹೊತ್ತಿಗೆಗಳ ಹಂಚಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಯುವ ಮತದಾರರನ್ನು ಸೆಳೆಯುವ ಕೆಲಸ ಮಾಡಬೇಕು. ನೂರಕ್ಕೆ ನೂರರಷ್ಟು ಬಿಜೆಪಿ ನಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಅತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದರು.ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಆರ್. ಮಹದೇವಸ್ವಾಮಿ, ಸಹ ಪ್ರಭಾರಿ ಅಶ್ವಥ್‌ನಾರಾಯಣ್, ಸಹ ಸಂಚಾಲಕ ಹೇಮಂತ್‌ಕುಮಾರ್‌ಗೌಡ, ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣನಾಯಕ, ಜಯಸುಂದರ್, ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಮಾಜಿ ಶಾಸಕರಾದ ಎಸ್. ಬಾಲರಾಜು, ಹರ್ಷವರ್ಧನ್, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮಂಗಳ ಸೋಮಶೇಖರ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಜಿಲ್ಲಾ ಮಾಧ್ಯಮ ಪ್ರಮುಖ್ ವಿರೇಂದ್ರ, ಮೊದಲಾದವರು ಇದ್ದರು.