ಸಾರಾಂಶ
ಸಿರಿಗೆರೆ: ನಮ್ಮ ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು, ಮಕ್ಕಳೇ ಆಸ್ತಿ ಎಂಬ ಮಾತುಗಳನ್ನು ಬಿಟ್ಟು ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿ ತಂದೆ, ತಾಯಿ, ಶಿಕ್ಷಕ ಮತ್ತು ನಾಗರೀಕ ಸಮಾಜ ತೆಗೆದುಕೊಳ್ಳಬೇಕು. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಮಾನ ಅವಕಾಶ ನೀಡಬೇಕು. ಮಕ್ಕಳನ್ನು ದೇಶದ ಆಸ್ತಿ ಎಂದು ಪ್ರತಿಬಿಂಬಿಸುವ ನಾವು ಮಕ್ಕಳ ರಕ್ಷಣೆಯನ್ನು ಮೊದಲ ಆದ್ಯತೆಯಾಗಿಸಿಕೊಳ್ಳಬೇಕೆಂದು ಡಾ.ಮಹೇಶ್ ತಿಳಿಸಿದರು.
ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕು ರಕ್ಷಣಾ ಸಮಿತಿಯ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚು ದಾಖಲಾಗುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮನೆ ಶಾಲೆ ಸುತ್ತಲಿನ ಪರಿಸರದಲ್ಲಿ ಮಕ್ಕಳ ಸುರಕ್ಷತೆ ದೊಡ್ಡ ಸವಾಲಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ಕಾರ್ಯ ನಿರ್ವಹಿಸಲು ಅರಿವು ಮೂಡಿಸಲು ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ನಮ್ಮ ಶಾಲೆ ಸುರಕ್ಷಿತವಾಗಿದೆ ಎಂಬ ಮನೋಭಾವನೆ ಮೂಡಿರುವುದು ನಮಗೆ ಸಂತಸದ ವಿಷಯ ಎಂದರು.
ಮಕ್ಕಳ ಸಮಿತಿಯ ನೋಡಲ್ ಅಧಿಕಾರಿ ಕರಿಬಸಪ್ಪ ಮಾತನಾಡಿ, ಪ್ರಸುತ್ತ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳ ಮುಗ್ಧತನ, ನಿಷ್ಕಲ್ಮಷ ಪ್ರೀತಿ ಕಣ್ಮರೆಯಾಗುತ್ತಿದೆ. ಇನ್ನೂ ಕೆಲವರಿಗೂ ಮಕ್ಕಳಿಗಿರುವ ಸಾಮಾನ್ಯ ಹಕ್ಕುಗಳ ಕುರಿತು ಮಾಹಿತಿ ಕೊರತೆ ಇದ್ದು, ಇದರ ಬಗ್ಗೆ ಅರಿವು ಮೂಡಿಲು ಇದ್ದು, ಸಕಾಲ ಅನ್ನಿಸುತ್ತದೆ.ವಿಶ್ವಸಂಸ್ಥೆ 1992ರಲ್ಲಿ ರೂಪಿಸಿದ ಈ ಮಕ್ಕಳ ಹಕ್ಕುಗಳನ್ನು ಅಂಗೀಕರಿಸಿದ್ದು, ನಮ್ಮ ಸಂವಿಧಾನದಲ್ಲಿ ಸಹ ಮಕ್ಕಳ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವಿದೆ. ಮಕ್ಕಳಿಗಾಗಿ ಸಹಾಯವಾಣಿ 1098 ಸಹ ರೂಪಿಸಲಾಗಿದೆ. ಕಡ್ಡಾಯ ಶಿಕ್ಷಣ ಜಾರಿಗೆ ಸಹ ತರಲಾಗಿದೆ ಎಂದರು.
ಪೋಷಕರು ಹಾಗೂ ಸಮಿತಿಯ ಸದಸ್ಯರಾದ ಹೊನ್ನಮ್ಮ ಮಾತನಾಡಿ, ಮಕ್ಕಳು ಏನಾದರೂ ಸಮಸ್ಯೆ ಉಂಟಾದರೆ 1098 ಸಹಾಯವಾಣಿ ಸಂಪರ್ಕಿಸಬೇಕು ಶಾಲೆಯಲ್ಲಿ ಈಗಾಗಲೇ ದೂರು ಪೆಟ್ಟಿಗೆ ಇದ್ದು ಸಮಸ್ಯೆಗಳನ್ನು ಮುಖ್ಯ ಶಿಕ್ಷಕರ ಅಧ್ಯಕ್ಷತೆಯಲ್ಲಿರುವ ಸಮಿತಿಯ ಮುಂದೆ ಮುಕ್ತವಾಗಿ ಪರಿಹರಿಸಿಕೊಳ್ಳಬಹುದು ಎಂದರು.ಸಮಿತಿಯ ಶಿಕ್ಷಕ ಸದಸ್ಯರಾದ ಮಂಜುನಾಥ್ ನಟರಾಜ್ ಪೋಷಕರ ಸಮಿತಿಯಿಂದ ಪಾರ್ವತಮ್ಮ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.