ಎಸ್‌.ಟಿ. ಜನಾಂಗದ ಬೆಳವಣಿಗೆಗೆ ಬಿಜೆಪಿ ನಿರಂತರವಾಗಿ ಸ್ಪಂದಿಸುತ್ತಿದೆ: ಸಿ.ಟಿ. ರವಿ

| Published : Mar 11 2024, 01:17 AM IST

ಎಸ್‌.ಟಿ. ಜನಾಂಗದ ಬೆಳವಣಿಗೆಗೆ ಬಿಜೆಪಿ ನಿರಂತರವಾಗಿ ಸ್ಪಂದಿಸುತ್ತಿದೆ: ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷ ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪರಿಶಿಷ್ಟ ಪಂಗಡ ಸಮುದಾಯದವನ್ನು ತಳಮಟ್ಟದಿಂದ ಎತ್ತಿಹಿಡಿದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬಲಿಷ್ಟಗೊಳಿಸುವ ಮೂಲಕ ಜನಾಂಗದ ಬೆಳವಣಿಗೆಗೆ ಪಕ್ಷ ನಿರಂತರವಾಗಿ ಸ್ಪಂದಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಎಸ್.ಟಿ. ಮೋರ್ಚಾ ಘಟಕದಿಂದ ಭಾನುವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ರಾಷ್ಟ್ರಪತಿ ಹುದ್ದೆಯನ್ನು ಹಿಂದುಳಿದ ವರ್ಗದ ಮಹಿಳೆಗೆ ಕಲ್ಪಿಸಿ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನೆಂದು ಕೇಳುವವರಿಗೆ ತಕ್ಕ ಉತ್ತರ ನೀಡಿದೆ. ಅದಲ್ಲದೇ ಮದಕರಿ ನಾಯಕ, ಓನಕೆ ಓಬವ್ವ, ಬಿಸ್ಸಾ ಮುಂಡ, ವಾಲ್ಮೀಕಿ ಸೇರಿದಂತೆ ಜನಾಂಗದ ಮಹಾಪುರುಷರ ಜಯಂತಿಗಳಿಗೆ ಅಡಿಪಾಯ ಹಾಕಿರುವುದು ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು.ಜನಾಂಗದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ಶೇ.3 ರಷ್ಟಿದ್ದ ಮೀಸಲಾತಿಯನ್ನು ಶೇ.7ಕ್ಕೆ ಏರಿಕೆ ಮಾಡಿದೆ. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಧ್ವನಿಯಾಗಿ ನಿಲ್ಲುವ ಮೂಲಕ ಸಮುದಾಯವನ್ನು ಮುನ್ನೆಲೆಗೆ ತರುವಲ್ಲಿ ಬಹಳಷ್ಟು ಶ್ರಮವಹಿಸಿದ್ದು ಹಲವಾರು ಜನಾಂಗದ ಮುಖಂಡರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಿಸಿ ಕಾಳಜಿ ತೋರಿದೆ ಎಂದರು. ರಾಜ್ಯದಲ್ಲಿ ಹಲವಾರು ಮಂದಿ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ಕೇವಲ ಜಾತಿ ರಾಜಕೀಯ ಮಾಡಿದ್ದಾರೆ. ಆದರೆ ಎಸ್.ಟಿ. ಸಮುದಾಯಕ್ಕೆ ಪರಿಪೂರ್ಣ ಸವಲತ್ತು ಒದಗಿಸಿ ಬೆಂಬಲಿಸಿರುವುದು ಬಿಜೆಪಿ ಮಾತ್ರ ಎಂದ ಅವರು, ಕಾಂಗ್ರೆಸ್ ರಾಮನ ಇತಿಹಾಸವನ್ನೇ ಕಾಲ್ಪನಿಕ ಎನ್ನುತ್ತಿದೆ. ಹಾಗಾದರೆ ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಕಾಲ್ಪನಿಕ ಎನ್ನುವ ಮನಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ ಎಂದರು. ಪ್ರಸ್ತುತ ಕಾಂಗ್ರೆಸ್ ಪಕ್ಷದವರು ಅಧಿಕಾರದ ಆಸೆಗೆ ಮಾತ್ರ ಹಿಂದುಳಿದ ವರ್ಗಕ್ಕೆ ಬೆಂಬಲಿಸುವ ನಾಟಕ ವಾಡುತ್ತಿದೆಯೇ ಹೊರತು ನೈಜವಾಗಿ ಸ್ಪಂದಿಸುವ ಗುಣ ಅವರಲ್ಲಿಲ್ಲ. ಮೋದಿ ನೇತೃತ್ವದ ಕೇಂದ್ರ ಹಾಗೂ ಈ ಹಿಂದೆ ಅಧಿಕಾರ ನಿರ್ವಹಿಸಿದ ಬಿಜೆಪಿ ಸರ್ಕಾರ ಕೊಡುಗೆಗಳೇ ಎಸ್.ಟಿ. ಸಮುದಾಯಕ್ಕೆ ಆರ್ಥಿಕವಾಗಿ ಶಕ್ತಿ ನೀಡಿರುವುದು ಸ್ಪಷ್ಟವಾಗಿದೆ ಎಂದರು.

ಬಹುತೇಕ ಪರಿಶಿಷ್ಟ ಜಾತಿ, ಪಂಗಡಕ್ಕೆ ಗುರುತಿಸಿ ಪ್ರೋತ್ಸಾಹಿಸಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಗಳನ್ನು ಗೆಲ್ಲಿಸುವ ಕೆಲಸ ನಿಮ್ಮಿಂದಾಗಬೇಕಿದೆ ಎಂದು ಸಿ ಟಿ ರವಿ ಹೇಳಿದರು. ದೇಶದ ರಕ್ಷಣೆ ಹಾಗೂ ಭದ್ರತೆ ಹಿತದೃಷ್ಟಿಯಿಂದ ಒಂದು ಹೆಜ್ಜೆ ಮುಂದಿಟ್ಟು ನೀವು ಸೇರಿದಂತೆ ನಿಮ್ಮವರನ್ನು ಮನವೊಲಿಸಿ ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿ ಯಾಗಿಸಲು ನಿರ್ಭೀತರಾಗಿ ಕೈಜೋಡಿಸಬೇಕು ಎಂದು ಹೇಳಿದರು. ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬಡವರು ಹಾಗೂ ಹಿಂದುಳಿದ ವರ್ಗದವರು ಚಿಕಿತ್ಸಾ ಸಮಯದಲ್ಲಿ ಹೆಚ್ಚು ಹಣಕಾಸು ಕಟ್ಟಲಾಗದೇ ಸಾವೇ ಕೊನೆಯಘಟ್ಟ ಅಂದುಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ದೇಶದ ಪ್ರಜೆಗಳಿಗೆ 5 ಲಕ್ಷ ರು. ಇನ್ಸೂರೆನ್ಸ್ ಕಲ್ಪಿಸುವ ಮೂಲಕ ಬದುಕಲು ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸಬೇಕು ಎಂದರು. ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ರಾಜ್ಯಾದ್ಯಂತ ಅತ್ಯಂತ ಹಿಂದುಳಿದ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಪಕ್ಷ ಬಿಜೆಪಿ. ಸರ್ಕಾರ ರಚನೆಗೊಂಡ ಪ್ರತಿ ಸಾರಿ ಒಂದಲ್ಲೊಂದು ಯೋಜನೆಗಳನ್ನು ಜನಾಂಗಕ್ಕೆ ರೂಪಿಸಿ ಏಳಿಗೆಗೆ ಸಹಕರಿಸುತ್ತಿರುವುದು ಮರೆಯಲಾಗದ ವಿಷಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಟಿ. ಮೋರ್ಚಾ ಘಟಕದ ಜಿಲ್ಲಾಧ್ಯಕ್ಷ ನಂದೀಶ್ ಮದಕರಿ, ಪರಿಶಿಷ್ಟ ಜನಾಂಗದ ಮಹಾಪುರುಷರ ಹಿನ್ನೆಲೆ ಅರಿತು ರಾಜ್ಯದಲ್ಲಿ ಅಧಿಕೃತ ಆಚರಣೆಗೆ ಸ್ಪಂದಿಸಿದ ಬಿಜೆಪಿಗೆ ಬೆಂಬಲಿಸಬೇಕು. ಜಿಲ್ಲೆಯ ಜನಾಂಗಕ್ಕೂ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲು ಸಹಕರಿಸಿರುವ ಅನುಕೂಲ ಮಾಡಿಕೊಟ್ಟಿರುವ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ನಂದೀಶ್ ಮದಕರಿ ಅವರಿಗೆ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಪಕ್ಷದ ಬಾವುಟ ನೀಡುವ ಮೂಲಕ ಜವಾಬ್ದಾರಿ ವಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ರಾಜ್ಯ ಎಸ್.ಟಿ. ಮೋರ್ಚಾ ಘಟಕದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಅನಿಲ್‌ಕುಮಾರ್, ಕಾರ್ಯಕಾರಣಿ ಸಮಿತಿ ಸದಸ್ಯ ರಾಜು ಆಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಂ.ಮಧುಕುಮಾರ್, ಎಂ.ಟಿ.ಶಂಕರ್, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಪ್ರದೀಪ್, ಮುಖಂಡರಾದ ದೀಪಕ್‌ದೊಡ್ಡಯ್ಯ, ಸುನೀಲ್, ಜಗದೀಶ್, ಜ್ಞಾನಮೂರ್ತಿ ಹಾಗೂ ಕಾರ್ಯಕರ್ತರು ಇದ್ದರು. 10 ಕೆಸಿಕೆಎಂ 1ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪರಿಶಿಷ್ಟ ಪಂಗಡಗಳ ಮುನ್ನಡೆ ಸಮಾವೇಶವನ್ನು ಮಾಜಿ ಸಚಿವ ಸಿ.ಟಿ. ರವಿ ಅವರು ಉದ್ಘಾಟಿಸಿದರು. ಶಾಸಕ ಆರಗ ಜ್ಞಾನೇಂದ್ರ, ಬಂಗಾರು ಹನುಮಂತು, ದೇವರಾಜ ಶೆಟ್ಟಿ, ನಂದೀಶ್‌ ಮದಕರಿ ಇದ್ದರು.ಪಕ್ಷ ದ್ರೋಹ ಮಾಡಿದ್ರೆ ಅವರವರ ಕರ್ಮ ಬೆನ್ನು ಹಿಡಿದು ಕಾಡುತ್ತೆ: ಸಿ.ಟಿ. ರವಿ

ಚಿಕ್ಕಮಗಳೂರು: ಪಕ್ಷ ದ್ರೋಹ ಮಾಡಿದ್ರೆ ಅವರವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಸೇರಿ ಸಿ.ಟಿ. ರವಿ ಅವರನ್ನು ಶೋಭಾ ಕರಂದ್ಲಾಜೆ ಸೋಲಿಸಿದರೆಂಬ ಸಾರ್ವಜನಿಕ ಚರ್ಚೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.ಇದನ್ನು ನಾನು ಸಾರ್ವಜನಿಕ ಚರ್ಚೆ ವಿಷಯವಾಗಿ ಮಾಡಲು ಬಯಸುವುದಿಲ್ಲ, ನನ್ನ ಗ್ರಹಚಾರ ಸರಿ ಇರಲಿಲ್ಲ, ನನ್ನದೇ ತಪ್ಪಿರಬಹುದೆಂದು ಈಗಾಗಲೇ ಹೇಳಿದ್ದೇನೆ ಎಂದರು.ಮೆಡಿಕಲ್ ಕಾಲೇಜು ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ನಿರ್ಮಾಣ, ಕುಡಿಯುವ ನೀರು ಕೆರೆ ತುಂಬಿಸುವ ಯೋಜನೆಗಳಿಗೆ, ವಿವಿಧ ಸಮುದಾಯಗಳಿಗೆ ಸಮುದಾಯ ಭವನಗಳು, ರೈತರಿಗೆ ನಿವೇಶನ, ಕೊಳಚೆ ಪ್ರದೇಶ ನಿವಾಸಿಗರಿಗೆ ಮನೆ ನಿರ್ಮಾಣ, ಇವೆಲ್ಲ ಮಾಡಿದ್ದರಿಂದ ಜನ ನಮ್ಮನ್ನು ಕೈ ಬಿಡುವುದಿಲ್ಲ ಎಂಬ ಅತಿಯಾದ ವಿಶ್ವಾಸ ಇತ್ತು. ವಿಶ್ವಾಸ ಕೂಡ ಹೀಗೊಮ್ಮೆ ಸೋಲಿಗೆ ಕಾರಣ ಆಗುತ್ತದೆ ಎಂದು ಕೊಂಡಿರಲಿಲ್ಲ ಎಂದು ಹೇಳಿದರು.ನಾನು ಇನ್ನೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಹೋಗುವುದಿಲ್ಲ, ಅವರ ಕರ್ಮವನ್ನು ಅವರೇ ಅನುಭವಿಸಬೇಕು. ನನ್ನ ತಪ್ಪಿನಿಂದ ಸೋತಿದ್ದೇನೆಂದು ಈಗಾಗಲೇ ಹೇಳಿಕೊಂಡಿದ್ದೇನೆ. ಯಾರಾದರೂ ಪಕ್ಷದ್ರೋಹ ಕೆಲಸ ಮಾಡಿದ್ದರೆ ಅವರ ಕರ್ಮ ಅವರ ಬೆನ್ನು ಹಿಡಿದು ಕಾಡುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಇಚ್ಚಿಸುವುದಿಲ್ಲ ಎಂದರು.