ಸಾರಾಂಶ
ಹಾವೇರಿ: ಬಿಜೆಪಿ ಜಾತಿ, ಧರ್ಮದ ಭಾವನೆಯನ್ನು ಕೆರಳಿಸಿ, ತಪ್ಪು ದಾರಿಗೆ ಎಳೆಯುವ ಮೂಲಕ ೩ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದೆ. ಬಿಜೆಪಿಯವರು ಪ್ರತಿಸಲ ಭಾವನಾತ್ಮಕ ವಿಷಯಗಳಿಂದ ಚುನಾವಣೆ ಎದುರಿಸುತ್ತಿದ್ದಾರೆ. ಆದರೆ, ಈ ಸಲ ಜನತೆ ಕಾಂಗ್ರೆಸ್ ಬೆಂಬಲಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಚ್ಚೇ ದಿನ್ ಆಯೇಗಾ ಅಂತ ಹೇಳಿದರು. ರೈತರ ಆದಾಯ ದ್ವಿಗುಣ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು. ಹಾಕುವ ಭರವಸೆ ನೀಡಿದ್ದರು. ಇದನ್ನು ನಂಬಿದ ಜನರು ಮತ ಹಾಕಿ ಮೊದಲ ಸಲ ಬಹುಮತ ನೀಡಿದ್ದರು.
2018ರಲ್ಲಿ ಪುಲ್ವಾಮಾ ಘಟನೆಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ದೇಶ ರಕ್ಷಣೆಯಲ್ಲಿ ಮೋದಿಯೇ ಶ್ರೇಷ್ಠ ಅಂತ ನಂಬಿಕೆ ಹುಟ್ಟಿಸಿದರು. ಈ ಬಾರಿ ಅಂತಹ ಘಟನೆಯ ವಿಷಯ ಸಿಕ್ಕಿಲ್ಲ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಮೋದಿ ಹಗುರ ಹೇಳಿಕೆ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ನೇಹಾ ಹತ್ಯೆ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
22 ತಿಂಗಳು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಏನು ಅಭಿವೃದ್ಧಿ ಮಾಡಿದ್ದಾರೆ, ಕೋವಿಡ್‌ನಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟು ಜನ ಮೃತಪಟ್ಟರು. ಅಧಿಕಾರ, ಖಜಾನೆ ಕೀಲಿ ಕೈ ಕೈಯಲ್ಲಿದ್ದಾಗ ಜಿಲ್ಲೆಗೆ, ರಾಜ್ಯಕ್ಕೆ ಬೊಮ್ಮಾಯಿ ಕೊಡುಗೆ ಏನು? ಎಂದು ಮಾನೆ ಪ್ರಶ್ನಿಸಿದರು. ರಾಜ್ಯಕ್ಕೆ ೧೮ ಸಾವಿರ ಕೋಟಿ ರು. ಬರ ಪರಿಹಾರ ನೀಡಿಲ್ಲ. 15ನೇ ಹಣಕಾಸು ಯೋಜನೆಯ ಅನುದಾನ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರವನ್ನು ಕೇಳಲಿಲ್ಲ ಎಂದರು.
ಹಸಿವು ಮುಕ್ತ ಪಟ್ಟಿಯಲ್ಲಿ ಹಿನ್ನಡೆ: ಪ್ರಶಾಂತ ಭೂಷಣ ವರದಿ ಪ್ರಕಾರ ವರ್ಡ್ ಹ್ಯಾಪಿನೆಸ್ ಇಂಡೆಕ್ಸ್(ವಿಶ್ವದ ಸುಖದ ಇಂಡೆಕ್ಸ್)ನಲ್ಲಿ ೨೦೧೪ರಲ್ಲಿ ಭಾರತ ೧೧೧ನೇ ಸ್ಥಾನದಲ್ಲಿತ್ತು. ಈಗ 10 ವರ್ಷದಲ್ಲಿ 126 ನೇ ಸ್ಥಾನಕ್ಕೆ ಇಳಿದಿದೆ. ಹಸಿವು ಮುಕ್ತ ಪಟ್ಟಿಯಲ್ಲಿ2014 ರಲ್ಲಿ 55 ನೇ ಸ್ಥಾನದಲ್ಲಿದ್ದ ಭಾರತ ಇಂದು ೧೧೧ನೇ ಸ್ಥಾನಕ್ಕೆ ಇಳಿದಿದೆ. 60 ಲಕ್ಷ ಕೋಟಿ ಇದ್ದ ಸಾಲ ಈಗ 165 ಲಕ್ಷ ಕೋಟಿ ರು.ಗೆ ಹೆಚ್ಚಾಗಿದೆ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು. ಕ್ಷೇತ್ರದಲ್ಲಿ ಎಲ್ಲ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಕ್ಷೇತ್ರದಾದ್ಯಂತ ಜನಬೆಂಬಲ ವ್ಯಕ್ತವಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿವೆ. ಏ.೨೮ರಿಂದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಈ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ಮೇ ೩ರಂದು ಸಿಎಂ ಸಮಾವೇಶ ರಾಣೆಬೆನ್ನೂರ ನಗರದ ಉರ್ದು ಮೈದಾನದಲ್ಲಿ ಮೇ ೩ರಂದು ಸಂಜೆ ೫.೩೦ಕ್ಕೆ ಆಯೋಜಿಸಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಏ. ೨೮ರಂದು ಬಂಕಾಪುರದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ರೋಡ್ ಶೋ ನಡೆಸಲಿದ್ದಾರೆ. ಏ. ೨೯ರಂದು ಹಾವೇರಿಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸತೀಶ ಜಾರಕಿಹೊಳಿ ಅವರ ಕಾರ್ಯಕ್ರಮ ನಡೆಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))