ಚಾತುರ್ವರ್ಣ ಸಮರ್ಥನೆಯ ಸಂವಿಧಾನ ಜಾರಿಗೆ ಬಿಜೆಪಿ ಹುನ್ನಾರ

| Published : Feb 07 2024, 01:46 AM IST

ಸಾರಾಂಶ

ರಾಂಬಾಹುದ್ಧೂರ ರಾಯ ಎಂಬುವರು ಪರ್‍ಯಾಯ ಸಂವಿಧಾನ ಬರೆದಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಇದರ ಜಾರಿಗೆ ಮುಂದಾಗಿದೆ ಎಂದು ಸಿಎಂ ಸಲಹೆಗಾರ, ಶಾಸಕ ಬಿಆರ್‌ ಪಾಟೀಲ್‌ ಆರೋಪ.

ಕನ್ನಡಪ್ರಭ ವಾರ್ತೆ ಆಳಂದ

ಬಿಜೆಪಿಗರು ಭಾರತ ಸಂವಿಧಾನ ಬದಿಗೊತ್ತಿ ಚಾತುರ್ವರ್ಣ ಸಮರ್ಥನೆಯ ಪರ್‍ಯಾಯ ಸಂವಿಧಾನ ಬರೆದು ಜಾರಿಗೆ ತರಲು ಹೊರಟ್ಟಿದ್ದಾರೆ ಎಂದಿರುವ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು, ಈಗಾಗಲೇ ರಾಂಬಾಹುದ್ಧೂರ ರಾಯ ಎಂಬುವರು ಪರ್‍ಯಾಯ ಸಂವಿಧಾನ ಬರೆದಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಇದರ ಜಾರಿಗೆ ಮುಂದಾಗಿದ್ದು, ಇದಕ್ಕೆ ದೇಶವಾಸಿಗಳು ಎಂದಿಗೂ ಅವಕಾಶ ನೀಡಬಾರದು, ಇದರ ವಿರುದ್ಧ ದಂಗೆ ಏಳಬೇಕೆಂದು ಕರೆ ನೀಡಿದರು.

ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಮತ್ತು ಪುರಸಭೆ ಕಾರ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಮತ್ತು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಗರು ಭಾರತ ಸಂವಿಧಾನ ಬದಲಿಸಿ ಚಾತುರ್ವಣ ಸಮರ್ಥನೆಯ ಸಂವಿಧಾನ ಜಾರಿಗೆ ಬಂದರೆ ದೇಶಕ್ಕೆ ಅಪಾಯವಿದೆ. ಸುಭದ್ರ ಸಂವಿಧಾನ ಉಳಿಯಬೇಕಾದರೆ ದೇಶದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬರಬೇಕೆಂದರು.

ಬಿಜೆಪಿಯಲ್ಲಿರುವ ಜಾತಿವಾದಿ ಕೊಳಕು ಮನಸ್ಸುಗಳು, ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಒಂದೊಮ್ಮೆ ಸಂವಿಧಾನದ ಬದಲಾವಣೆಗೆ ಕೈ ಹಾಕಿದರೆ, ದೇಶದಲ್ಲಿ ರಕ್ತಪಾತವೇ ನಡೆದು ಹೋಗುತ್ತದೆ ಎಂದರು.

ಸಂವಿಧಾನದಲ್ಲಿ ಎಲ್ಲ ಜಾತಿ, ಧರ್ಮೀಯರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ತುಳಿತಕ್ಕೆ ಒಳಗಾದವರಿಗೆ ವಿಶೇಷ ಸ್ಥಾನಮಾನ ನೀಡಿರುವುದು ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೇ ಮೌಢ್ಯ, ಜಾತೀಯತೆ, ಅಸ್ಪೃಶ್ಯತೆ, ಕಂದಾಚಾರಗಳಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಹೀಗಾಗಿಯೇ, ಕೆಲವರು ಸಂವಿಧಾನ ಬದಲಿಸಬೇಕೆಂಬ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ಬಿ.ಆರ್. ಪಾಟೀಲ ಹೇಳಿದರು.

78 ಮಹಿಳಾ ಫಲಾನುಭವಿಗಳಿಗೆ ವಿದ್ಯುತ್ ಯಂತ್ರ ವಿತರಿಸಲಾಯ್ತು. ತಾಪಂ ಇಒ ಮಾನಪ್ಪ ಕಟ್ಟಿಮನಿ ಸಂವಿಧಾನ ಮತ್ತು ಐದು ಗ್ಯಾರಂಟಿ ಅನುಷ್ಠಾನ ಕುರಿತು ಮಾತನಾಡಿದರು. ಉಪನ್ಯಾಸಕ ಜೀತೆಂದ್ರ ತಳವಾರ ಅವರು ದೇಶಕ್ಕೆ ಡಾ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲ ಆಶಯ ಕುರಿತು ಮಾತನಾಡಿದರು.

ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ರಾಮಚಂದ್ರ ಗೋಳಾ, ಸಿಡಿಪಿಒ ಶ್ರೀಕಾಂತ ಮೇಂಗಜಿ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಸಂಜಯ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತರಾವ್ ರಾಠೋಡ, ಲೋಕೋಪಯೋಗಿ ಎಇಇ ಆನಂದ, ಸಿಪಿಐ ಮಹಾದೇವ ಪಂಚಮುಖಿ ಇದ್ದರು.