ದೇಶ, ಜಿಲ್ಲೆಯ ಕೆಟ್ಟ ಪರಿಸ್ಥಿತಿಗೆ ಬಿಜೆಪಿಯವರೇ ಕಾರಣ: ಸಚಿವ ಮಂಕಾಳ ವೈದ್ಯ

| Published : Apr 14 2024, 01:49 AM IST

ದೇಶ, ಜಿಲ್ಲೆಯ ಕೆಟ್ಟ ಪರಿಸ್ಥಿತಿಗೆ ಬಿಜೆಪಿಯವರೇ ಕಾರಣ: ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರಿಂದ ದೇಶ, ಉತ್ತರ ಕನ್ನಡ ಜಿಲ್ಲೆಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕಿದೆ ಎಂದು ಸಚಿವ ಮಾಂಕಾಳ್ ಎಸ್. ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಬೆಳಕೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರವನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ಎಸ್. ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬಿಜೆಪಿಯವರಿಂದ ದೇಶ, ಉತ್ತರ ಕನ್ನಡ ಜಿಲ್ಲೆಗೆ ಕೆಟ್ಟ ಪರಿಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕಿದೆ. ಜಿಲ್ಲೆಯಲ್ಲಿ ಸಿಆರ್ ಝೆಡ್, ಅತಿಕ್ರಮಣ ಸಕ್ರಮ ಮುಂತಾದ ಸಮಸ್ಯೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಜಿಲ್ಲೆಯಲ್ಲಿ 30 ವರ್ಷ ಬಿಜೆಪಿ ಸಂಸದರು ಅಧಿಕಾರದಲ್ಲಿದ್ದರೂ ಸಹ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಬಿಜೆಪಿ ಸರಕಾರದ ಬೆಲೆ ಏರಿಕೆ ನೀತಿಯಿಂದ ಜನತೆ ಬೇಸತ್ತಿದ್ದಾರೆ. ಅಡುಗೆ ಅನಿಲ, ಪೆಟ್ರೋಲ್ ಹೀಗೆ ಎಲ್ಲಾ ವಸ್ತುಗಳ ದರ ಏರಿಕೆ ಆಗಿದೆ. ಕೆಲವು ಸಮಸ್ಯೆಗಳು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವುದರಿಂದ ಅಲ್ಲಿಯೇ ಅದನ್ನು ಬಗೆಹರಿಸಬೇಕು ಎಂದರು.

ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ಬಿಜೆಪಿ ಭಿನ್ನಮತದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸಬೇಕು. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ತರಲು ಪ್ರಯತ್ನಿಸುತ್ತೇನೆ. ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿದ್ದು, ಕ್ಷೇತ್ರಕ್ಕೆ ಪತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಎಲ್ಲ ಗ್ಯಾರೆಂಟಿಯನ್ನು ವಿತರಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿಯಿಂದ ಜನತೆಗೆ ಅನುಕೂಲ ಆಗಿದೆ. ಕಾರ್ಯಕರ್ತರು ಪ್ರತಿ ಮನೆಗೂ ಕಾಂಗ್ರೆಸ್ ಯೋಜನೆ ಬಗ್ಗೆ ತಿಳಿಸುವ ಕೆಲಸ ಮಾಡಬೇಕು. ಬಿಜೆಪಿ ಅಧಿಕಾರದ ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಆಗಿದೆ ಎಂದು ಕಾರ್ಯಕರ್ತರು ಪ್ರಶ್ನಿಸಬೇಕು ಎಂದರು.

ಜಿಲ್ಲಾ ಕಾಗ್ರೆಸ್ ಅಧ್ಯಕ್ಷ ಸಾಯಿನಾಥ ಗಾವ್ಕಾರ್ ಪ್ರಾಸ್ತಾವಿಕ ಮಾತನಾಡಿದರು. ಚುನಾವಣಾ ಉಸ್ತುವಾರಿ ವಿಶ್ವಾಸ ಅಮೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ್, ಪ್ರಮುಖರಾದ ರಾಮ ಮೊಗೇರ್, ಈರಪ್ಪ ಗರಡಿಕರ, ಆಲ್ಬರ್ಟ್ ಡಿಕೊಸ್ತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು ಮುಂತಾದವರಿದ್ದರು.

ಕಾಂಗ್ರೆಸ್ ಕಿಸಾನ್ ಸೆಲ್ ನ ನಾರಾಯಣ ನಾಯ್ಕ ಸ್ವಾಗತಿಸಿದರು. ಭಾಸ್ಕರ ನಾಯ್ಕ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ವಂದಿಸಿದರು.