ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಇಲ್ಲದ ಪ್ರಕರಣ ಮುಂದಿಟ್ಟು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿ(ಮೂಡ)ಹೆಸರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸೇರಿಕೊಂಡು ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಸರು ಕೆಡಿಸಲು ಪಾದಯಾತ್ರೆ ಮೊರೆ ಹೋಗಿದ್ದಾರೆ. ಹಗರಣ ಹೆಸರಿನಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಇವರುಗಳ ಪ್ರಯತ್ನ ಫಲಿಸುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಿಎಂ ವಿರುದ್ಧವೇ ಹಕ್ಕುಚ್ಯುತಿಗೆ ತರಲು ಮುಂದಾಗಿರುವುದು ರಾಜಕೀಯ ಪ್ರೇರಿತ. ಅಕ್ರಮ ಗಣಿಗಾರಿಕೆ ಸೇರಿದಂತೆ ಹಗರಣಗಳನ್ನೇ ಮೈಮೇಲೆ ಹೊತ್ತಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಮತ್ತು ಸಿಎಂ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ಮೂಡ ಸೈಟ್ ವಿಚಾರದಲ್ಲಿ ತಲಾ 50: 50ರಷ್ಟು ಒಪ್ಪಂದ ಪ್ರಕಾರ ಪಡೆದುಕೊಳ್ಳಲಾಗಿದೆ. ಅದನ್ನೇ ಹಗರಣ ಎಂದು ಬೀದಿಗೆ ತರುವ ಕೆಲಸ ವಿಪಕ್ಷಗಳಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಪರಾಮರ್ಶಿಸಿ ಪರಿಸರ ವರದಿ ಜಾರಿಗೊಳಿಸಲಿ:ಪ್ರೊ.ಮಾಧವ ಗಾಡ್ಗೀಳ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಯತ್ನಿಸಿದಾಗ ಜನವಸತಿ ಪ್ರದೇಶ ಕಾರಣ ಜನತೆ ವಿರೋಧಿಸಿದರು. ಗಾಡ್ಗೀಳ್ ವರದಿ ಪುನರ್ ಪರಿಶೀಲನೆ ಹಾಗೂ ಕಸ್ತೂರಿರಂಗನ್ ವರದಿ ಶಿಫಾರಸಿಗೂ ವಿರೋಧ ವ್ಯಕ್ತವಾಯಿತು. ಈ ವರದಿ ಬಗ್ಗೆ ರಾಜ್ಯಗಳು ಕೇಂದ್ರಕ್ಕೆ ಅಭಿಪ್ರಾಯ ಸಲ್ಲಿಸಿವೆ. ಆದರೆ ಇದು ಕರಡು ಪ್ರತಿಯಲ್ಲೇ ಇದ್ದು, ಇದನ್ನು ಪರಾಮರ್ಶಿಸಿ ಜಾರಿಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ ಎಂದರು.
ಉತ್ತರಾಖಂಡ ಹಾಗೂ ಕೇರಳದ ವಯನಾಡ್‌ನಲ್ಲಿ ನಡೆದ ಪರಿಸರ ದುರಂತದ ಬಳಿಕ ಕೇಂದ್ರ ಸರ್ಕಾರ ಕೂಡ ಪರಿಸರ ವರದಿ ಜಾರಿಗೆ ಮುಂದಾಗಿದೆ. ಹಲವು ರಾಜ್ಯಗಳ ಸಲಹೆ ಪರಿಗಣಿಸಿ ಈ ವರದಿ ಜಾರಿಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಗಣಿಗಾರಿಕೆಗೆ ಅವಕಾಶ ನೀಡಿಲ್ಲ:
ನಾನು ಅರಣ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಒಂದೇ ಒಂದು ಎಕರೆ ಪ್ರದೇಶ ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಬಳ್ಳಾರಿ ಅರಣ್ಯದಲ್ಲಿ ಶೇ.60ರಷ್ಟು ಗಣಿಗಾರಿಕೆಯನ್ನು ನಿಲ್ಲಿಸಿದ್ದೇನೆ. ಬೇಲೆಕೇರಿ ಬಂದರು ಘಟನೆಯಲ್ಲಿ ಅಧಿಕಾರಿಗಳು ಪ್ರಮಾಣಿಕ ತನಿಖೆ ನಡೆಸಿದ್ದಾರೆ. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಕೂಡ ಸೂಕ್ತ ತನಿಖೆ ನಡೆಸಿದ್ದಾರೆ. ಅದರಲ್ಲಿ ತಪ್ಪಿತಸ್ಥ ಜನಪ್ರತಿನಿಧಿಗಳ ವಿರುದ್ಧ ಕ್ರಮಕ್ಕೆ ಕಾರಣವಾಗಿದ್ದಾರೆ. ಈಗ ಅದೇ ಬಿಜೆಪಿ ಹಗರಣ ವಿರುದ್ಧ ಹೋರಾಟ ನಡೆಸುತ್ತಿರುವುದು ವಿಪರ್ಯಾಸ ಎಂದರು.ಮುಖಂಡರಾದ ಶಶಿಧರ ಹೆಗ್ಡೆ, ಎಂ.ಜಿ.ಹೆಗಡೆ, ಅಪ್ಪಿ, ಅಶ್ರಫ್, ಹರಿನಾಥ್, ನವೀನ್ ಡಿಸೋಜಾ, ಟಿ.ಕೆ. ಸುಧೀರ್ ಮತ್ತಿತರರಿದ್ದರು.