ಸಾರಾಂಶ
ಗದಗ: ಇಂದಿನ ಆಧುನಿಕತೆಯ ಭರಾಟೆಯಲ್ಲಿ ಮನುಷ್ಯತ್ವ ಮತ್ತು ಮಾನವೀಯ ಸಂಬಂಧ ಕಡಿಮೆಯಾಗುತ್ತಿವೆ. ಮಾಂತ್ರಿಕವಾಗಬೇಕಿದ್ದ ಸಂಬಂಧಗಳು ಯಾಂತ್ರಿಕವಾಗಿ ನಾವಿಂದು ಯಂತ್ರ ಮಾನವರಾಗುತ್ತಿರುವುದು ದುರಂತದ ಸಂಗತಿ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಹೇಳಿದರು.
ಅವರು ನಗರದ ಬಸವೇಶ್ವರ ಕಲಾ,ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶ್ರೀಮಾತೃಶ್ರೀ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ರಾಣಿ ಚೆನ್ನಮ್ಮ ಪಡೆಯ ಸಹಯೋಗದಿಂದ ರೋಣದ ಲಿಂ. ಮಾತೋಶ್ರೀ ಬಸಮ್ಮ ಸಂಗನಗೌಡ ಪಾಟೀಲ ಪುಣ್ಯ ಸ್ಮರಣೋತ್ಸವ ಮತ್ತು ಗುಳೇದಗುಡ್ಡದ ಲಿಂ. ಮಾತೋಶ್ರೀ ಲಕ್ಷ್ಮಮ್ಮ. ಮ.ಗೌಡರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಮಾತೃಶ್ರೀ ಸ್ಮರಣೋತ್ಸವ ಹಾಗೂ ಮಹಿಳೆಯರ ಆತ್ಮಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನಿಕ ಸೌಲಭ್ಯಗಳು ಒಂದೆಡೆ ಮನುಷ್ಯರನ್ನು, ಮನುಷ್ಯತ್ವವನ್ನು ದೂರ ಮಾಡುತ್ತಿವೆ ಎಂದೆನ್ನಿಸುವದು. ನಾವು ದೂರದ ಚಂದ್ರನನ್ನು ತಲುಪಿದ್ದೇವೆ ಆದರೆ ಪಕ್ಕದಲ್ಲಿರುವ ಮನುಷ್ಯನನ್ನು ಕಡೆಗಣಿಸಿ ಮೊಬೈಲ್ ತಿಕ್ಕುತ್ತಿದ್ದೇವೆ. ಪಕ್ಕದಲ್ಲಿದ್ದವರೊಂದಿಗೆ ಸಂವಹನ ಇಲ್ಲದಂತಾಗಿದೆ. ಕೌಟುಂಬಿಕ ಸಂಬಂಧಗಳು ಕಡಿತಗೊಳ್ಳುತ್ತಿವೆ. ಅವಿಭಕ್ತ ಕುಟುಂಬಗಳ ಕೊಂಡಿಗಳು ಕಳಚಿಕೊಂಡು ಇತಿಮಿತಿಗೊಳ್ಳುತ್ತಿವೆ. ಒಂದಾಗಿರುವ ಚೆಂದಾಗಿರುವ ಗಟ್ಟಿತನದ ಬದುಕು ಟೋಳ್ಳು ಆಗುತ್ತಿರುವುದು ವಿಷಾದನೀಯ ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ತಾಯಿ ಬಸಮ್ಮ ತಂದೆ ಸಂಗನಗೌಡ ಪಾಟೀಲರು ನೀಡಿದ ಸಂಸ್ಕಾರ, ಸಂಸ್ಕೃತಿ, ಶಿಕ್ಷಣದಿಂದ ನಮ್ಮ ಕುಟುಂಬ ಅವಿಭಕ್ತ ಕುಟುಂಬವಾಗಿ ಬೆಳೆದು ಬಂತು ಇಂದಿಗೂ ನಾವೆಲ್ಲ ಸಹೋದರರು, ಕುಟುಂಬದವರು ಒಂದಾಗಿ ಚೆಂದಾಗಿ ಇರುವುದಕ್ಕೆ ಹಿರಿಯರು ಹಾಕಿಕೊಟ್ಟ ಸನ್ಮಾರ್ಗವೇ ಕಾರಣ ಎಂದರು.ಸಾನ್ನಿಧ್ಯ ವಹಿಸಿದ್ದ ಜ. ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಮಾತನಾಡಿ, ಸರ್ವ ಕಾಲಕ್ಕೂ ಮಹಿಳೆ ಪೂಜ್ಯನೀಯ. ಕುಟುಂಬ, ಸಮಾಜ ದೇಶವನ್ನು ಪ್ರಗತಿಯಲ್ಲಿ ಮುನ್ನಡೆಸುವ ಸಾಮರ್ಥ್ಯ ತಾಯಂದಿರಲ್ಲಿದೆ. ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಕುಟುಂಬಗಳು ಒಂದಾಗಿ ಚೆಂದಾಗಿ ಇರಬೇಕೆಂದರೆ ಎಲ್ಲ ಮಹಿಳೆಯರಲ್ಲಿ ತಾಯಿ ಗುಣ ಬರಬೇಕು ಅಂತಹ ಗುಣ ಬಸಮ್ಮನವರಲ್ಲಿ, ಲಕ್ಷ್ಮಮ್ಮನವರಲ್ಲಿತ್ತು ಎಂದರು.
ಈ ವೇಳೆ ಪ್ರಾ.ಡಾ.ರಮೇಶ ಕಲ್ಲನಗೌಡರ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿದರು.ಬಿ.ಎಸ್. ಪಾಟೀಲ, ರಘು ಪುರುಷೋತ್ತಮ, ವಿದ್ಯಾಧರ ದೊಡ್ಡಮನಿ, ಸಿದ್ಧಲಿಂಗಪ್ಪ ಚಳಗೇರಿ, ಸುರೇಶ ಅಂಗಡಿ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಎಸ್.ಎಂ. ಗೌಡರ ಸ್ವಾಗತಿಸಿದರು. ಆರ್.ಜಿ. ಚಿಕ್ಕಮಠ ಪರಿಚಯಿಸಿದರು. ಆನಂದಯ್ಯ ವಿರಕ್ತಮಠ ನಿರೂಪಿಸಿದರು. ಅಪ್ಪಣ್ಣ ಗೌಡರ ವಂದಿಸಿದರು.