ಸಾರಾಂಶ
ಹೊನ್ನಾವರ: ಗೇರುಸೊಪ್ಪ ಜಲಾಶಯದಿಂದ ನೀರು ಹೊರ ಬಿಟ್ಟಿರುವುದರಿಂದ ಶರಾವತಿ ನದಿ ಹಾಗೂ ಘಟ್ಟದ ಮೇಲೆ ಮಳೆ ಹೆಚ್ಚಾಗಿರುವುದರಿಂದ ಗುಂಡಬಾಳ ನದಿ ತುಂಬಿ ಹರಿಯುತ್ತಿವೆ. ತಾಲೂಕಿನ ನದಿತೀರದ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದ್ದು, 227 ಕುಟುಂಬದಿಂದ 670 ಜನರು ನೆರೆಸಂತ್ರಸ್ತರಾಗಿದ್ದಾರೆ.
ಲಿಂಗನಮಕ್ಕಿ ಜಲಾಶಯದ ರೇಡಿಯಲ್ ಗೇಟ್ ಮೂಲಕ ಶನಿವಾರ ಬೆಳಗ್ಗೆ 40,870 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ. ಗೇರುಸೊಪ್ಪಾ ಜಲಾಶಯದ ರೇಡಿಯಲ್ ಗೇಟ್ ಮೂಲಕ 39,795 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.ಶರಾವತಿ ನದಿ ತೀರದ ಜನರಿಗಾಗಿ ತೀರದ ಸರಳಗಿ ಮತ್ತು ಅಳ್ಳಂಕಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಗುಂಡಬಾಳ ನದಿ ತೀರದ ಊರುಗಳಾದ ಗುಂಡಬಾಳ, ಹೆಬ್ಬೈಲ್, ಗುಂಡಿಬೈಲ, ಚಿಕ್ಕನಕೋಡ, ಹಾಡಗೇರಿ, ಹುಡಗೋಡ, ಹಡಿನಬಾಳ, ಕಡಗೇರಿ, ನಾಥಗೇರಿಯಲ್ಲಿ ನದಿತಟದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳ ಜನರು ಕಾಳಜಿಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಾವಿನಕುರ್ವಾ ನವದುರ್ಗಾ ದೇವಾಲಯದ ಆವಾರಕ್ಕೆ ಶರಾವತಿ ನದಿಯ ಪ್ರವಾಹ ಆವರಿಸಿದೆ. ದೇವರಮೋಟೆ, ಮೋಟೋ, ಕಳಸಿನಮೋಟೋ, ರಂಗಿನಮೋಟೋ, ಸಾಣಾಮೋಟೋ ಭಾಗದ ನದಿತಟದ ಪ್ರದೇಶಗಳಿಗೆ ಶರಾವತಿ ನದಿ ನೀರು ಆವರಿಸಿದೆ. ತೋಟ, ಗದ್ದೆಗಳು ನೆರೆಯಿಂದ ಬಾಧಿತವಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಗುಂಡಬಾಳ ನದಿ ಹಾಗೂ ಶರಾವತಿ ನದಿ ತೀರದಲ್ಲಿ 15 ಕಾಳಜಿಕೇಂದ್ರಗಳನ್ನು ತೆರೆಯಲಾಗಿದೆ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಕೂರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುರ್ನಕಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆರೊಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಹೊಳೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ, ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಸರಳಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಡಗೋಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲ್ ನಂ. 1, ಸರ್ಕಾರಿ ಪ್ರೌಢಶಾಲೆ ಅಳ್ಳಂಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸರಳಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲ್ ನಂ. 2, ಅಂಗನವಾಡಿ ಕೇಂದ್ರ ಹೆಬೈಲ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಬಾಳ ನಂ. 2, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿರನಗೋಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಾಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಲವಳ್ಳಿಯಲ್ಲಿ ಕಾಳಜಿಕೇಂದ್ರ ತೆರೆಯಲಾಗಿದೆ. ಒಟ್ಟು 18 ಕಾಳಜಿಕೇಂದ್ರ ತೆರೆಯಲಾಗಿದ್ದು, 227 ಕುಟುಂಬದಿಂದ 670 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.