ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆ.5 ಮತ್ತು 6ರಂದು ಮದ್ದೂರು ಮತ್ತು ಮಂಡ್ಯದಲ್ಲಿ ಜನಾಂದೋಲನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ಕಾಂಗ್ರೆಸ್‌ನಿಂದ ಗುರುತರ ಕಾನೂನು ಉಲ್ಲಂಘನೆಯಾಗದಿದ್ದರೂ ಗ್ಲೋಬಲ್ ಸಿದ್ಧಾಂತದಂತೆ ಹತ್ತಾರು ಬಾರಿ ಸುಳ್ಳನ್ನೇ ಹೇಳಿ ಸತ್ಯ ಮಾಡಲು ಪಾದಯಾತ್ರೆ ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಕುತಂತ್ರವನ್ನು ಜನತೆಗೆ ತಿಳಿಸುವ ಸಲುವಾಗಿ ಜನಾಂದೋಲನ ಸಭೆ ಏರ್ಪಡಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಅವ್ಯವಹಾರಗಳ ಬಗ್ಗೆ ಮುಖ್ಯಮಂತ್ರಿಯವರು ಸದನದಲ್ಲಿ ಹೇಳಿಕೆ ಕೊಟ್ಟಿದ್ದರೂ ಪಾದಯಾತ್ರೆ ಎಂಬ ನಾಟಕವಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆದಿರುವ ೨೧ ಹಗರಣಗಳನ್ನು ಪರಿಶೀಲಿಸಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿ -ಜೆಡಿಎಸ್‌ನವರು ‘ತಾನು ಕಳ್ಳ ಪರರ ನಂಬ’ ಎಂಬಂತೆ ವರ್ತಿಸುತ್ತಿದ್ದಾರೆ. ಇದನ್ನು ಜನತೆಯ ಮುಂದೆ ತೆರೆದಿಡುವ ಪ್ರಯತ್ನ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯನ್ನು ಕುಗ್ಗಿಸಲಾಗದೆ ಪಾದಯಾತ್ರೆ ಮಾಡುತ್ತಿರುವ ವಿಪಕ್ಷಗಳ ಮುಖವಾಡ ಕಳಚಲು ಜನಾಂದೋಲನ ಅವಶ್ಯಕ ಎಂದರು.ಈ ಜನಾಂದೋಲನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಲವಾರು ಸಚಿವರು ಹಾಗೂ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು, ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ನುಡಿದರು.
ಆಗಸ್ಟ್ ೫ ರಂದು ಮದ್ದೂರು ಸ್ಟೇಡಿಯಂನಲ್ಲಿ, ೬ರಂದು ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು (ಕಲ್ಲು ಕಟ್ಟಡ) ಮುಂಭಾಗ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ಪಾದಯಾತ್ರೆ ಮಾಡಲು ಬಿಜೆಪಿ-ಜೆಡಿಎಸ್ ನವರಿಗೆ ನೈತಿಕತೆ ಇಲ್ಲ. ಅವರ ವಾದ ‘ಹಿಟ್ ಅಂಡ್ ರನ್ ಕೇಸ್’ ನಂತೆ ಅವರಲ್ಲೇ ೨-೩ ಗುಂಪುಗಳು ಪಾದಯಾತ್ರೆಯನ್ನು ವಿರೋಧಿಸುತ್ತಿವೆ. ಅವರಲ್ಲಿ ಒಗ್ಗಟ್ಟು ಇಲ್ಲ.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ರಾಜಕೀಯ ದುರುದ್ದೇಶದಿಂದ ಭಾಗವಹಿಸುತ್ತಿದ್ದಾರೆ. ಇವರ ನಾಟಕ ಜನರಿಗೆ ಅರ್ಥವಾಗುತ್ತದೆ. ಕಾಂಗ್ರೆಸ್‌ಗೆ ಜನಾಂದೋಲನದ ಬೆಂಬಲ ಸಿಗುತ್ತಿದೆ ಎಂದರು.
ಆದ್ದರಿಂದ ಕಾಂಗ್ರೆಸ್ ಬಂಧುಗಳು, ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಒಂದು ಜನಾಂದೋಲನ ಸಮಾವೇಶವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.ಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ನಯೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಪ್ಪ, ರಮೇಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬೋರೇಗೌಡ, ಅನ್ನದಾನಿ ಹಾಜರಿದ್ದರು.