ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕುತಂತ್ರದಿಂದಾಗಿ ಸಿದ್ದರಾಮಯ್ಯನವರ ತೇಜೋವಧೆ ಸಂಚು ನಡೆಯುತ್ತಿದ್ದು, ಇದನ್ನು ಪ್ರತಿಪಟಿಸಿ ಇದೇ ದಿ.26 ರ ಗುರುವಾರ ಶಿಕಾರಿಪುರವನ್ನು ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ ಎಂದು ತಾಲೂಕು ಅಹಿಂದ ಯುವ ಒಕ್ಕೂಟದ ಅಧ್ಯಕ್ಷ ನಗರದ ಮಾಲತೇಶ ಹೇಳಿದರು.ಬುಧವಾರ ಪಟ್ಟಣದ ಸುದ್ದಿ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ಕೋಟಿಗಳನ್ನು ಅಕ್ರಮ ಆಸ್ತಿ ಪಾಸ್ತಿ ಮೂಲಕ ಪ್ರಸಿದ್ಧರಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ವಿಜಯೇಂದ್ರ , ಕೇಂದ್ರ ಸಚಿವ ಕುಮಾರಸ್ವಾಮಿ ರವರ ಕುತಂತ್ರದಿಂದಾಗಿ, ರಾಜಕಾರಣದಲ್ಲಿ ಬಿಳಿ ಹಾಳೆ ಯಂತಿರುವ ಸಿದ್ದರಾಮಯ್ಯನವರಿಗೆ ಕಳಂಕ ಅಂಟಿಸುವ ಉದ್ದೇಶದಿಂದ, ಉದ್ದೇಶಪೂರ್ವಕವಾಗಿ ಪಿತೂರಿ ಗಳನ್ನು ಮಾಡುತ್ತಿದ್ದು, ಇದನ್ನು ಪ್ರತಿಭಟಿಸಿ ತಾಲೂಕು ಅಹಿಂದ ಯುವ ಘಟಕದ ವತಿಯಿಂದ ಶಿಕಾರಿಪುರವನ್ನು ಸಂಪೂರ್ಣವಾಗಿ ಗುರುವಾರ ಬಂದ್ ಕರೆಯಲಾಗಿದೆ. ಬೆಳಿಗ್ಗೆ 10 ರಿಂದ ಪ್ರತಿಭಟನಾ ಮೆರವಣಿಗೆ ನಂತರ ಸಭೆಯನ್ನು ನಡೆಸಲಾಗುವುದು ಇದಕ್ಕೆ ನಾಗರಿಕರು, ಸಿದ್ದರಾಮಯ್ಯ ಅಭಿಮಾನಿಗಳು, ವ್ಯಾಪಾರಸ್ಥರು ಸಹಕಾರ ನೀಡಬೇಕೆಂದು ಕೋರಿದರು.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ, ಸಿದ್ದರಾಮಯ್ಯನವರ ಸರ್ಕಾರದ ಜನಪ್ರಿಯತೆಯಿಂದಾಗಿ ದಿಕ್ಕು ತೋಚದಂತಾಗಿ, ಸಿದ್ದರಾಮಯ್ಯನವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ನಾಡಿನ ಜನ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದು ಅಹಿಂದ ಮುಖಂಡ ಭಂಡಾರಿ ಮಾಲತೇಶ್ ಹೇಳಿದರು.ಪುರಸಭಾ ಸದಸ್ಯ ಉಳ್ಳಿ ದರ್ಶನ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪನವರು ಫೋಕ್ಸೋ ಕೇಸ್ ನಲ್ಲಿ ಜಾಮೀನಿನ ಮೇಲೆ ಹೊರಗಿದ್ದು, ಪ್ರೇರಣ ಟ್ರಸ್ಟಿಗೆ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಚೆಕ್‌ನಲ್ಲಿ ಹಣ ಪಡೆದಿದ್ದನ್ನು ಮರೆತಿದ್ದಾರೆ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ತಾಲೂಕು ಅಹಿಂದ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ,ಕಸಬ, ವಿಎಸ್‌ಎಸ್‌ಎನ್ ನಿರ್ದೇಶಕ ನಗರದ ರವಿಕಿರಣ್, ಡಿ.ಆರ್.ಗಿರೀಶ್,ಅಹಿಂದ ಮುಖಂಡ ಎನ್ ವಿ ಕಿಟ್ಟಿ, ಬನ್ನೂರು ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.