ನೇಹಾ ಕೊಲೆ ಖಂಡಿಸಿ ಬಿಜೆಪಿ -ಜೆಡಿಎಸ್ ಪ್ರತಿಭಟನೆ

| Published : Apr 23 2024, 12:59 AM IST

ಸಾರಾಂಶ

ರಾಮನಗರ: ಹುಬ್ಬಳ್ಳಿಯ ನೇಹಾ ಕೊಲೆ ಖಂಡಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಮನಗರ: ಹುಬ್ಬಳ್ಳಿಯ ನೇಹಾ ಕೊಲೆ ಖಂಡಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ಈ ಪ್ರತಿಭಟನೆಯಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹಳೇ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಗೌತಮ್ ಗೌಡ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲವಾಗಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಹೆಣ್ಣು ಮಗಳ ಜೀವಕ್ಕೆ ಬೆಲೆ ಕೊಡುತ್ತಿಲ್ಲ. ಬರ್ಬರ ಹತ್ಯೆ ನಡೆದಿದೆ. ಆದರೂ ಆರೋಪಿ ಪರವಹಿಸಿಕೊಂಡು ವೈಯಕ್ತಿಕ ಸಂಬಂಧ ಕಾರಣ ಎಂಬ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ನೇಹಾ ಕೊಲೆ ಹೀನ ಕೃತ್ಯ. ಆದರೆ ರಾಜ್ಯ ಸರ್ಕಾರ ಒಂದು ಧರ್ಮದ ಜನರನ್ನು ಮೆಚ್ಚಿಸಲು ಮುಂದಾಗಿದೆ. ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಪೊಲೀಸರಿಗೆ ಸೂಚನೆ ಕೊಟ್ಟು ನಿರ್ದಿಷ್ಟ ಕೋಮಿನ ಜನರನ್ನು ಮುಟ್ಟಬೇಡಿ ಎಂದು ಹೇಳಿದ್ದಾರಂತೆ ಎಂದು ಆರೋಪಿಸಿದರು.

ಪೊಲೀಸ್ ಇಲಾಖೆಯನ್ನು ಈ ಸರ್ಕಾರ ದುರ್ಬಳೆಕೆ ಮಾಡಿಕೊಂಡು ಹೋರಾಟಗಳನ್ನು, ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಹೀನ ಕೃತ್ಯಗಳಿಗೆ ಕಮ್ಮಕ್ಕು ನೀಡುತ್ತಿದೆ. ಈ ಸರ್ಕಾರವನ್ನು ಮನೆಗೆ ಕಳುಹಿಸುವವರೆಗೂ ಇಂತಹ ಹೋರಾಟಗಳು ಮುಂದುವರೆಯುತ್ತವೆ ಎಂದು ಎಚ್ಚರಿಸಿದರು.

ಕೆಆರ್‌ಡಿಸಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅತ್ಯಾಚಾರ, ಕೊಲೆ, ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಗೃಹ ಸಚಿವರ ಹೇಳಿಕೆ ಸರಿಯಲ್ಲ ಅವರಿಗೆ ನಾಚಿಕೆಯಾಗಬೇಕು ಎಂದು ಖಂಡಿಸಿದರು.

ರಾಜ್ಯದಲ್ಲಿ ಹಿಂದೂಗಳಿಗೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಹಾಗೊಮ್ಮೆ ಆ ಪಕ್ಷ (ಕಾಂಗ್ರೆಸ್) ಗೆದ್ದರೆ ಹಿಂದೂಗಳ ಬದುಕು ಕಷ್ಟವಾಗುತ್ತದೆ. ಏಪ್ರಿಲ್ 26ರಂದು ನಾಗರೀಕರು ಗಟ್ಟಿ ನಿರ್ಧಾರ ಮಾಡಬೇಕು. ದೇಶವನ್ನು ದೇಶವಾಸಿಗಳನ್ನು ರಕ್ಷಿಸುವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯ ಜೆಡಿಎಸ್ ವಕ್ತಾರರಾದ ಪ್ರಶಾಂತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದ ಸ್ವಾಮಿ, ಎರಡೂ ಪಕ್ಷಗಳ ಪ್ರಮುಖರಾದ ಎಸ್.ಆರ್.ನಾಗರಾಜು, ವರದರಾಜ ಗೌಡ, ಸಿಂಗ್ರಯ್ಯ, ಕಾಳಯ್ಯ, ಯೋಗೀಶ್, ರುದ್ರದೇವರು, ಕೆಂಪರಾಜು, ಜಯಕುಮಾರ್, ಕಿಶನ್ ಗೌಡ, ಪಿ.ಶಿವಾನಂದ, ಜಿ.ಟಿ.ಕೃಷ್ಣ, ಬಿ.ಉಮೇಶ್, ವಾಸು, ಲೀಲಾವತಿ, ಪುಷ್ಪಲತಾ, ಸಾನ್ವಿ, ವರಲಕ್ಷ್ಮಿ, ಜಯಶೀಲ ಮತ್ತಿತರರು ಭಾಗವಹಿಸಿದ್ದರು.22ಕೆಆರ್ ಎಂಎನ್‌ 2.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನೇಹಾ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದರು.