ಸಾರಾಂಶ
ಬಿಜೆಪಿ ಮುಖಂಡರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ಬಿಜೆಪಿ ಮುಖಂಡರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.ಬಿಜೆಪಿ ಯುವ ಮೋರ್ಚಾದ ನಗರ ಘಟಕ ಅಧ್ಯಕ್ಷ ವೆಂಕಟೇಶ (31) ಮೃತ. ಕೊಲೆ ಆರೋಪಿಗಳಾದ ಗಂಗಾವತಿಯ ಸಲೀಂ, ಬೆಳಗಾವಿಯ ಧನರಾಜ್ ಸೋಲಂಕಿ, ಬೆಂಗಳೂರು ಮೂಲದ ಭೀಮಾ, ಮಾರತಹಳ್ಳಿಯ ವಿಜಯ ಬಂಧಿತರು.
ಮಂಗಳವಾರ ನಗರದ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಬೈಕ್‌ನಲ್ಲಿ ವೆಂಕಟೇಶ ಮನೆಗೆ ತೆರುಳುತ್ತಿದ್ದರು. ತಡರಾತ್ರಿ 1.30ಕ್ಕೆ ಎಪಿಎಂಸಿ ರಸ್ತೆಯ ರಿಲಯನ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬಂದಾಗ ಹಂತಕರು ಬೈಕ್‌ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡಿಸಿದ್ದು, ವೆಂಕಟೇಶ ಕೆಳಗೆ ಬಿದ್ದಿದ್ದಾರೆ. ಆಗ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ವೆಂಕಟೇಶನ ಮೇಲೆ ಮಚ್ಚು, ಕೊಡಲಿಯಿಂದ ಹಲ್ಲೆ ಮಾಡಿ ಕೊಚ್ಚಿದ್ದಾರೆ.ಹಂತಕರು ತಂದಿದ್ದ ಕಾರು ಕೆಟ್ಟಿದ್ದರಿಂದ ಆನೆಗೊಂದಿ ಮಾರ್ಗದ ವಿವೇಕಾನಂದ ಕಾಲನಿ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ವೆಂಕಟೇಶ ಬೈಕ್ ಹಿಂದೆ ಬರುತ್ತಿದ್ದ ಆತ್ಮೀಯರು ಈ ಕೃತ್ಯ ಕಂಡು ಭಯಭೀತರಾಗಿ ಓಡಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಗಾಯಾಳು ವೆಂಕಟೇಶ ಕೊನೆಯುಸಿರೆಳೆದಿದ್ದಾರೆ.
2023ರಲ್ಲಿ ರಾಯಚೂರು ರಸ್ತೆಯ ರೈಲ್ವೆ ಸೇತುವೆ ಕೆಳಗೆ ಮಾರುತಿ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿತ್ತು. ಈ ಹಲ್ಲೆಕೋರರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆಂಬ ಕಾರಣಕ್ಕೆ ಆ ಗ್ಯಾಂಗ್ ವೆಂಕಟೇಶ ಕೊಲೆಗೆ ಸಂಚು ರೂಪಿಸಿತ್ತು. ಸಂಚಿನ ಭಾಗವಾಗಿ ನಾಲ್ವರು ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತೆಲುಗು ಪತ್ರಿಕೆ ವಶ:
ಈ ಹತ್ಯೆ ಸುದ್ದಿ ತಿಳಿಯುದ್ದಂತೆ ಎಸ್ಪಿ ರಾಮ್ ಎಲ್ ಅರಸಿದ್ದಿ ಅವರು 4 ತಂಡ ರಚಿಸಿ ತನಿಖೆ ನಡೆಸಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದ ಆಧಾರದ ಮೇಲೆ ಹಂತಕನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹತ್ಯೆಗೆ ಬಳಸಿದ್ದ ಕಾರಿನಲ್ಲಿದ್ದ ಮದ್ಯದ ಬಾಟಲಿ, ಪ್ಯಾಂಟ್-ಶರ್ಟ್ ಮತ್ತು ತೆಲಗು ಪತ್ರಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಕೋಟ್))
ಬಿಜೆಪಿಯ ಗಂಗಾವತಿ ನಗರ ಘಟಕ ಯುವ ಮೋರ್ಚಾದ ಅಧ್ಯಕ್ಷ ವೆಂಕಟೇಶ ಹತ್ಯೆ ಪ್ರಕರಣದಲ್ಲಿ ಗಂಗಾವತಿಯ ರವಿ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದೆ. ಕೆಲವೇ ಗಂಟೆಗಳಲ್ಲಿ 4 ಆರೋಪಿಗಳನ್ನು ಪತ್ತೆಮಾಡಿ ಬಂಧಿಸಿದ್ದೇವೆ. ತನಿಖೆ ಮುಂದುವರೆದಿದೆ.- ರಾಮ್.ಎಲ್.ಅರಸಿದ್ದಿ, ಎಸ್‌ಪಿ ಕೊಪ್ಪಳ