ಸಾರಾಂಶ
ಕೈಗೆ ಬಂದ ಭತ್ತದ ಬೆಳೆ ಆಕಾಲಿಕ ಮಳೆಯಿಂದಾಗಿ ರೈತರ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು.
ಕಾರಟಗಿ:
ತಾಲೂಕು ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು, ಸರ್ಕಾರ ಶೀಘ್ರವೇ ರೈತರಿಗೆ ಪ್ರತಿ ಎಕರೆಗೆ ₹ 50 ಸಾವಿರ ಬೆಳೆಹಾನಿ ಪರಿಹಾರ ವಿತರಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಒತ್ತಾಯಿಸಿದರು.ತಾಲೂಕಿನ ಹಗೆದಾಳ, ಚಳ್ಳೂರು, ಚಳ್ಳೂರು ಕ್ಯಾಂಪ್ ಸೇರಿ ವಿವಿದೆಢೆ ಮಳೆಯ ಹೊಡೆತಕ್ಕೆ ಹಾನಿಗೊಳಗಾದ ಭತ್ತದ ಬೆಳೆಹಾನಿ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮುಖಂಡ ಬಸವರಾಜ ಕ್ಯಾವಟರ್ ಜತೆಗೂಡಿ ಶುಕ್ರವಾರ ವೀಕ್ಷಿಸಿ ಮಾತನಾಡಿದರು.
ಚಳ್ಳೂರುಕ್ಯಾಂಪ್, ಚಳ್ಳೂರು, ಹಗೇದಾಳ, ಸೋಮನಾಳ, ಸಿಂಗನಾಳ, ತೊಂಡಿಹಾಳ, 28ನೇ ಕಾಲುವೆ, ಹಣವಾಳ ಹೀಗೆ ಕ್ಷೇತ್ರದ ವಿವಿದೆಢೆ ಬೆಳೆಹಾನಿ ವೀಕ್ಷಣೆ ಮಾಡಿದ್ದೇನೆ. ಮಳೆಯ ಹೊಡೆತಕ್ಕೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈರು ಸಂಪೂರ್ಣ ನೆಲಕಚ್ಚಿವೆ. ಎಕರೆಗೆ ₹ 40 ಸಾವಿರ ವ್ಯಯಿಸಿರುವ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿಂಗಾರು ಬಿತ್ತನೆ ಮಾಡಿ ಎಕರೆಗೆ ₹ 1 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಸಚಿವ ಶಿವರಾಜ ತಂಗಡಗಿ ಮುಖ್ಯಮಂತ್ರಿ ಮನವೊಲಿಸಿ 15ರಿಂದ 20 ದಿನಗಳೊಳಗೆ ಪರಿಹಾರ ಕೊಡಿಸಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಕೈಗೆ ಬಂದ ಭತ್ತದ ಬೆಳೆ ಆಕಾಲಿಕ ಮಳೆಯಿಂದಾಗಿ ರೈತರ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಆದಷ್ಟು ಬೇಗನೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಈ ವೇಳೆ ಬಿ. ಗೋಪಾಲರಾವ್, ಶ್ರೀಶೈಲಗೌಡ ಪಾಟೀಲ್, ಗಾದಿಲಿಂಗಪ್ಪ, ಎಚ್. ರಾಜಶೇಖರ ವಕೀಲರು, ಸೋಮಶೇಖರ ಹೋಗಾರ ಇದ್ದರು.