ಸಾರಾಂಶ
ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮೋಸ, ಸಂಚು, ಒಳಗಿನ ಮೋಸ ಅರಿಯಲಾಗದೇ, ಅತಿಯಾದ ಆತ್ಮವಿಶ್ವಾಸದಿಂದ ನಾವು ಸೋತಿದ್ದೇವೆ. ಇಲ್ಲಿ ಬಿಜೆಪಿ ಸೋತಿದ್ದು ಕಾಂಗ್ರೆಸ್ ಪಕ್ಷದಿಂದಲ್ಲ. ಕೆಲವರ ಕುತಂತ್ರ, ಬಿಜೆಪಿಯ ಕೆಲ ಮುಖಂಡರಿಂದ ಎಂಬ ಮಾತನ್ನು ನಾವು ಒಪ್ಪಲೇಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿದ್ದಾರೆ.
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮೋಸ, ಸಂಚು, ಒಳಗಿನ ಮೋಸ ಅರಿಯಲಾಗದೇ, ಅತಿಯಾದ ಆತ್ಮವಿಶ್ವಾಸದಿಂದ ನಾವು ಸೋತಿದ್ದೇವೆ. ಇಲ್ಲಿ ಬಿಜೆಪಿ ಸೋತಿದ್ದು ಕಾಂಗ್ರೆಸ್ ಪಕ್ಷದಿಂದಲ್ಲ. ಕೆಲವರ ಕುತಂತ್ರ, ಬಿಜೆಪಿಯ ಕೆಲ ಮುಖಂಡರಿಂದ ಎಂಬ ಮಾತನ್ನು ನಾವು ಒಪ್ಪಲೇಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿದರು.
ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಇದು. ನಾವು ಏನು ಮಾಡಿದ್ದೇವೆಂಬುದು ಇತರರಿಗೆ ಅಲ್ಲದಿದ್ದರೂ, ನಮ್ಮ ಆತ್ಮಕ್ಕಂತೂ ಗೊತ್ತಿದೆ ಎಂದರು.ನಾನು ಬಿಜೆಪಿ ನಾಯಕನಲ್ಲ. ಆದರೆ, ಇಲ್ಲಿ ಮೈತ್ರಿ ಸೋತಿದ್ದ ನೋವು ನಿಮಗಿಂತ ಹೆಚ್ಚಾಗಿ ನಮಗೂ ಆಗಿದೆ. ಕಾಂಗ್ರೆಸ್ಸಿನ ಕೆಲಸಕ್ಕೆ ಬಾರದ ಗ್ಯಾರಂಟಿಗಳು, ಕಾರ್ಯ ಸಾಧುವಲ್ಲದ ಸುಳ್ಳು ಭರವಸೆಗಳಿಂದಾಗಿ, ಇಲ್ಲಿ ಕೆಲವರ ಮೋಸ, ಸಂಚು, ಒಳಮೋಸ, ಅತಿ ಆತ್ಮವಿಶ್ವಾಸದಿಂದ ಸೋಲುಂಡಿದ್ದೇವೆ. ಕೆಲ ಮತಗಳನ್ನು ಪಡೆಯುವಲ್ಲಿ, ಪರಿಶಿಷ್ಟರ ಮತ ಸೆಳೆಯುವಲ್ಲಿ ವಿಫಲರಾದೆವು. ಕುರುಡು ಕಾಂಚಾಣದ ಕುಣಿತವೂ ಇಲ್ಲಿ ಹೆಚ್ಚಾಗಿತ್ತು ಎಂದು ದೂರಿದರು.
ಕ್ಷೇತ್ರದಲ್ಲಿ ಗೆಲ್ಲಬೇಕಾದವರು ಸೋತರು, ಸೋಲಬೇಕಾದವರು ಗೆದ್ದರು. ಹರಿಹರದಲ್ಲಿ ನಾನು, ಶಾಸಕ ಬಿ.ಪಿ.ಹರೀಶ ಜೋಡಿ ಎತ್ತಿನಂತೆ ಕೆಲಸ ಮಾಡಿದೆವು. ಇಲ್ಲಿ ಅಭ್ಯರ್ಥಿ ಸೋಲಲಿಲ್ಲ. ನಾವೆಲ್ಲರೂ ಸೋತಿದ್ದೇವೆ. ಕೆಲ ಮುಖಂಡರಂತೂ ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆಳೆಯಿತು ಎಂಬಂತೆ ವರ್ತಿಸಿದ್ದು ನಿಮ್ಮ ಕಣ್ಣ ಮುಂದೆಯೇ ಇದೆ. ಅವಕಾಶವನ್ನು ಕೊಟ್ಟ ದೇವರು ಗಾಯತ್ರಮ್ಮ ಅವರಿಗೆ ಅದೃಷ್ಟ ಕೊಡಲಿಲ್ಲ. ಬರೀ ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆಗೆಂದೇ 2 ಗುಂಪು ಹೋಗಿದ್ದವು. ಇದೂ ಸಹ ಚುನಾವಣೆ ಮೇಲೆ ಪರಿಣಾಮ ಬೀರಿತು ಎಂದು ಅವರು ಸೋಲಿನ ವಿಶ್ಲೇಷಣೆ ಮಾಡಿದರು.