ಮಧ್ಯ ಪ್ರಾಚ್ಯದ ಯುದ್ಧದಿಂದಾಗಿರುವ ಸಮಸ್ಯೆ ಬಗ್ಗೆ ಅರಿವಿದ್ದರೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರೊಂದಿಗೆ ಸಂಸತ್ ಭವನದ ಮುಂದೆ ಟೀ, ಕಾಫಿ ಕುಡಿಯುತ್ತ ಎಲ್‌ಪಿಜಿ ಸಿಲಿಂಡರ್ ಬಗ್ಗೆ ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ ನಗರದಲ್ಲಿ ಶನಿವಾರ ಸಂಜೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಪ್ರಾಚ್ಯದ ಯುದ್ಧದಿಂದಾಗಿರುವ ಸಮಸ್ಯೆ ಬಗ್ಗೆ ಅರಿವಿದ್ದರೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರೊಂದಿಗೆ ಸಂಸತ್ ಭವನದ ಮುಂದೆ ಟೀ, ಕಾಫಿ ಕುಡಿಯುತ್ತ ಎಲ್‌ಪಿಜಿ ಸಿಲಿಂಡರ್ ಬಗ್ಗೆ ಸುಳ್ಳು, ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಆರೋಪಿಸಿ ನಗರದಲ್ಲಿ ಶನಿವಾರ ಸಂಜೆ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಗಡಿಯಾರ ಕಂಬದ ಬಳಿ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಪ್ರತಿಕೃತಿಯನ್ನು ಮಾಡಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಗಾಯತ್ರಿ ಸಿದ್ದೇಶ್ವರ, ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದಲ್ಲಿ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಿದೆಯೇ ಹೊರತು, ಗೃಹ ಬಳಕೆಯ ಸಿಲಿಂಡರ್‌ಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೂ, ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷದ ಸಂಸದರು ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುತ್ತ, ದೇಶ ವಾಸಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದವರು ಜಾಗತಿಕ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಇರಾನ್‌ನಿಂದ ನಿರ್ಬಂಧಿತವಾದ ಹೋರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ಮೊದಲ ತೈಲ ನೌಕೆ ಬಂದಿದೆ. ಇನ್ನೂ ಸಾಕಷ್ಟು ತೈಲ ಹಡಗುಗಳು ಭಾರತಕ್ಕೆ ಬರಲಿವೆ. ಮಧ್ಯ ಪ್ರಾಚ್ಯದ ಯುದ್ಧದ ಮಧ್ಯೆಯೂ ಭಾರತದ ತೈಲ ಹಡಗುಗಳ ಸಂಚಾರಕ್ಕೆಇರಾನ್ ಸಹ ಸಮ್ಮತಿಸಿರಿವುದು ನರೇಂದ್ರ ಮೋದಿಯವರ ಉತ್ತಮ ಅಂತಾರಾಷ್ಟ್ರೀಯ ಸಂಬಂಧಕ್ಕೆ ಕಾರಣವಾಗಿದೆ ಎಂದರು.
ಪಕ್ಷದ ನಿಕಟ ಪೂರ್ವ ಜಿಲ್ಲಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಇಲ್ಲವೆಂದು ಅಧಿಕೃತವಾಗಿ ಜಿಲ್ಲಾಧಿಕಾರಿಗಳೆ ಸ್ಪಷ್ಟಪಡಿಸುತ್ತಾರೆ. ಲೋಕಸಭೆ ಮುಂಭಾಗದಲ್ಲಿ ಕುಳಿತು ರಾಹುಲ್ ಗಾಂಧಿ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ವಿಪಕ್ಷದ ಸಂಸದರು ಎಲ್‌ಪಿಜಿ ಸಿಲಿಂಡರ್ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಕಾಂಗ್ರೆಸ್ಸಿನ ಸಂಸದರ ಮನೆಯಲ್ಲಿ ಯಾವುದರಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಪಕ್ಷದ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಗ್ಗಳ್ಳಿ ವೀರೇಶ, ಮುಖಂಡರಾದ ಭಾಗ್ಯ ಪಿಸಾಳೆ, ದೇವೀರಮ್ಮ, ರೇಣುಕಾ ಕೃಷ್ಣ, ಚೇತನಾ ಬಾಯಿ, ನೀತಾ ನಂದೀಶ, ಮಂಜುಳಾ ಇಟಗಿ, ವೀಣಾ ನಂಜಪ್ಪ, ಸೀಮಾ, ಶಾಂತಮ್ಮ, ಗೌರಮ್ಮ ಪಾಟೀಲ, ಶ್ಯಾಗಲೆ ದೇವೇಂದ್ರಪ್ಪ, ತಾರೇಶ ನಾಯ್ಕ, ಮಾಯಕೊಂಡ ಜಿ.ಎಸ್.ಶ್ಯಾಮ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಶಂಕರಗೌಡ ಬಿರಾದಾರ, ತರಕಾರಿ ಶಿವು, ಬಾಲಚಂದ್ರಶ್ರೇಷ್ಟಿ, ವೈ.ಶಿವಾನಂದ, ಕಿಶೋರಕುಮಾರ, ಬಸಣ್ಣ, ಕುಮಾರ, ರಾಮಚಂದ್ರ, ಮಾಲತೇಶ, ಗೋವಿಂದರಾಜ ಇತರರು ಇದ್ದರು.
ದೀಪದ ವಿರುದ್ಧ ಅಲ್ಲಿ ಸಹಿ ಮಾಡಿ ಇಲ್ಲಿ ದೀಪ ಹಚ್ತಾರೆ!ತಮಿಳುನಾಡಿನ ಬೆಟ್ಟದ ಮೇಲಿನ ತಿರುವನಂತಪುರಂನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ದೀಪಗಳನ್ನು ಹಚ್ಚಲು ಸುಪ್ರೀಂ ಆದೇಶ ಕೊಟ್ಟಿತ್ತು. ಆದರೆ, ಕೆಲವು ಕಾಂಗ್ರೆಸ್ ಸಂಸದರು ದೀಪವನ್ನು ಹಚ್ಚದಂತೆ ಸಹಿ ಹಾಕಿದ್ದರು. ಇತ್ತ ದುಗ್ಗಮ್ಮನ ಹಬ್ಬದ ಹಂದರಗಂಬ ಪೂಜೆಯಲ್ಲಿ ತಾವೇ ದೀಪ ಹಚ್ಚಿದ ದಾವಣಗೆರೆ ಸಂಸದರು ಅತ್ತ ತಮಿಳುನಾಡಿನ ವೆಂಕಟೇಶ್ವರ ದೇವ ಸ್ಥಾನದಲ್ಲಿ ದೀಪ ಹಚ್ಚದಂತೆ ತಡೆಯಲು ಸಹಿ ಹಾಕಿದ್ದಾರೆ. ಇದು ಯಾವ ರೀತಿ ನಡೆ? ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿ ಬಿಟ್ಟು, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವಂತಹ ಆಸೆ ಕಾಂಗ್ರೆಸ್ಸಿನ ಸಂಸದರಿಗೆ ಇದ್ದಂತಿದೆ. ಹಾಗಾಗಿಯೇ ಕೇಂದ್ರದ ವಿರುದ್ಧ ನಿರಂತರ ಮಿಥ್ಯಾರೋಪಗಳನ್ನೇ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೆ ಮತ್ತು ಹಿಂದೂಗಳ ವಿರುದ್ಧ ಹೇಳಿಕೆ ನೀಡುವುದನ್ನು ಮೊದಲು ಬಿಡಬೇಕು. ಮೊದಲು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಗಮನ ಹರಿಸಲಿ.ಗಾಯತ್ರಿ ಸಿದ್ದೇಶ್ವರ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು.